

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜವನ್ನು 2 ಎಗೆ ಮೀಸಲಾತಿ ಸೇರಿಸುವ ಕ್ರಮ ವಿರೋಧಿಸಿ ಡಿ.26 ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಕೊಂಡಸ್‌ಕೊಪ್ಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ರಾಷ್ಟ್ರದಲ್ಲಿ ಮೀಸಲಾತಿ ವಂಚಿತ ಜಾತಿಗಳಿಗೆ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಅಚ್ಚುಕಟ್ಟಾಗಿ ಜಾತಿ ಮಾಡದಿದ್ದರೂ ರಾಜಕೀಯ ತೀರ್ಮಾನಗಳಿಂದ ಬಲಾಡ್ಯರು ಮೀಸಲಾತಿ ಪಡೆದು ಶೋಷಿತರ ಮೀಸಲಾತಿ ಪಾಲು ಕಬಳಿಸುತ್ತಿರುವುದು ಶೋಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟದಲ್ಲಿ ಮೀಸಲಾತಿ ವರ್ಗೀಕರಣ ಸಾಮಾಜಿಕ ಸ್ಥಿತಿಗತಿಯ ಆಧಾರದ ಮೇಲೆ ಮಾಡಿರುವುದರಿಂದ ಎಲ್ಲ ವರ್ಗಗಳಿಗೂ ಮೀಸಲಾತಿ ಲಭ್ಯವಾಗುತ್ತಿದೆ. ಆದರೇ ಅನೇಕ ಬಲಾಡ್ಯ ಜಾತಿಗಳು ಅತೀ ಹಿಂದುಳಿದ ವರ್ಗಗಗಳ ಪ್ರವರ್ಗ 1 ಮತ್ತು ಪ್ರವರ್ಗ 2 ಎದಲ್ಲಿ ಕಾನೂನು ಬಾಹಿರವಾಗಿ ಮೀಸಲಾತಿ ಪಡೆಯುತ್ತಿವೆ. ಈಗಾಗಲೇ ಬಲಾಡ್ಯ ವರ್ಗಗಳಿಗೆ ಶೇ.9 ರಷ್ಟು ಮೀಸಲಾತಿ ಇದ್ದರು ಬೇರೆಯವರ ಬುಟ್ಟಿಗೆ ಕೈ ಹಾಕುವುದು ಸರಿಯಲ್ಲ ಎಂದು ದೂರಿದರು.
ಇನ್ನು ತಮ್ಮದೇ ಪ್ರವರ್ಗ 3ಬಿಯಲ್ಲಿ ಶೇ.5 ರಷ್ಟು ಹಾಗೂ ಸಾಮಾನ್ಯ ವರ್ಗದ ಶೇ.50 ರಲ್ಲಿ ತಮ್ಮ ಪಾಲಿನ ಮೀಸಲಾತಿ ಪಡೆಯುತ್ತಿದ್ದರು 104 ಜಾತಿಗಳು ಇರುವ ಪ್ರವರ್ಗ 2ಎ ಮೇಲೆ ಲಿಂಗವಂತ ಪಂಚಮಸಾಲಿಗಳು ಕಣ್ಣು ಏಕೇ? ಸರ್ಕಾರದ ಮಟ್ಟದಲ್ಲಿ ಯಾವ ವೈಜ್ಞಾನಿಕ ವರದಿ ಇಲ್ಲದೆ ಮುಂದುವರೆದ ಜಾತಿಗಳನ್ನು ಹಿಂದುಳಿದ ಪ್ರವರ್ಗಗಳಲ್ಲಿ ಸೇರಿಸುವ ದುಸಾಹಸಕ್ಕೆ ಕೈ ಹಾಕುವುದು ನಾವು ವಿರೋಧಿಸುತ್ತೇವೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅಲ್ಲಿರುವ ವೈಜ್ಞಾನಿಕ ಅಂಕಿ-ಅಂಶಗಳ ಪ್ರಕಾರ ನೂತನ ಮೀಸಲಾತಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ವಿರೋಧಗಳನ್ನು ನಿರ್ಲಕ್ಷ್ಯಿಸಿ ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವ ಕ್ರಮ ಕೈಗೊಂಡರೇ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ರಾಜ್ಯಾದ್ಯಂತ ಪ್ರತಿಭಟನೆ, ಹೋರಾಟ ನಡೆಸಲಿದೆ. ಸದ್ಯ ಸರ್ಕಾರದ ಗಮನ ಸೆಳೆಯಲು ನಮ್ಮ ಒಕ್ಕೂಟದ ನೇತೃತ್ವದಲ್ಲಿ ಡಿ.26 ರಂದು ಬೆಳಗಾವಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು. ಶೋಷಿತ ವರ್ಗಗಳಿಗೆ ಅನ್ಯಾಯ ಎಸಗುವ ಇಂತಹ ಹುನ್ನಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಮುಖಂಡರಾದ ರವೀಂದ್ರ ಕಲಬುರ್ಗಿ, ಗೋಪಾಲ ಹಳಪೇಟ, ಮಹಾಂತೇಶ ಇಳಗೇರಿ, ವಿಠಲ ಹಡಪದ, ರಾಮಣ್ಣ ಹಡಪದ, ಡಾ.ಎಂ.ಎಸ್.ದಡ್ಡೇನವರ, ಡಾ.ದೇವರಾಜ ಪಾಟೀಲ ಸೇರಿದಂತೆ ಇತರರು ಇದ್ದರು.