

ಬಾಗಲಕೋಟೆ: ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದಿದ್ದ ದಲಿತ-ಸವರ್ಣಿಯರ ನಡುವಿನ ಬಿಗುವಿನ ವಾತಾವರಣ ತಿಳಿಗೊಳಿಸಿ ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಸಾಗುವ ಬಗ್ಗೆ ಜಿಲ್ಲಾಡಳಿತದ ವತಿಯಿಂದ ಭಾನುವಾರ ನಡೆದ ಸಂಧಾನ ಸಭೆ ಬಹುತೇಕ ಸುಖಾಂತ್ಯ ಕಂಡಿದೆ.
ಇಬ್ಬರು ನಡುವೆ ಉಂಟಾಗಿದ್ದ ಗಲಾಟೆಗೆ ಸಂಬಂಽಸಿದಂತೆ ಸವರ್ಣಿಯರ ಪರವಾಗಿ ಗ್ರಾಮದಲ್ಲಿ ದಿಢೀರನೇ ದಲಿತರಿಗೆ ಬಹಿಷ್ಕರಿಸುವ ಡಂಗೂರ ಸಾರಿದ್ದು ಪರಿಸ್ಥಿತಿ ಬಿಗಾಡಾಯಿಸಲು ಕಾರಣವಾಗಿತ್ತು. ಇದಕ್ಕೆ ಸಂಬಂಽಸಿದಂತೆ ಭಾನುವಾರ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಲಿತ ಸಂಘಟನೆ ಮುಖಂಡರು, ಗ್ರಾಮದ ಹಿರಿಯರ ನಡುವಿನ ಶಾಂತಿ ಸಭೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಆದರೆ, ಘಟನೆಗೆ ಸಂಬಂಽಸಿದಂತೆ ಕೆರೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಹಾಗೂ ಜಾತಿನಿಂದನೆ ಪ್ರಕರಣದ ತನಿಖೆ ನಡೆಸಲಾಗುವುದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಅಽಕಾರಿಗಳು ಭರವಸೆ ನೀಡಿದ್ದಾರೆ. ಇದೇ ವೇಳೆ ಪ್ರಕರಣ ದಾಖಲಿಸಲು ವಿಳಂಬ ಮಾಡಿರುವ ಕೆರೂರ ಠಾಣೆ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕು ಎನ್ನುವ ಬೇಡಿಕೆಯನ್ನು ದಲಿತ ಸಂಘಟನೆ ಮುಖಂಡರು ಮಾಡಿದ್ದಾರೆ.
ಸೆಪ್ಟಂಬರ್ ೧೦ ರಂದು ಉಗಲವಾಟ ಗ್ರಾಮದಲ್ಲಿ ದಲಿತ ಯುವಕ ಅರ್ಜುನ ಮಾದರ ಎನ್ನುವವರು ದೇವಸ್ಥಾನಕ್ಕೆ ಪ್ರವೇಶಿದ ಕಾರಭಣಕ್ಕೆ ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ದರಿಂದ ಮುದಿಗೌಡ ಸತ್ಯನ್ನವರ, ಮಂಜುನಾಥ ಮೂಲಿಮನಿ ಜಾತಿ ನಿಂಧನೆಯ ಜೊತೆಗೆ ಕಟ್ಟಿಗೆ, ಕಲ್ಲುನಿಂದ ಹೊಡಿಬಡಿ ಮಾಡಿದ್ದಾರೆ. ಇನ್ನುಳಿದ ೧೮ ಜನರು ಕೈಗಳಿಂದ ಹೊಡೆದಿದ್ದಾರೆ. ಇದರಿಂದ ಅರ್ಜುನಗೆ ಒಳಪೆಟ್ಟು ಆಗಿದೆ. ಇದರ ಜೊತೆಗೆ ಮತ್ತೊಬ್ಬ ಆರೋಪಿ ತುಳಸಿಗೇರಪ್ಪ ತಳವಾರ ಎನ್ನುವ ವ್ಯಕ್ತಿ ದಲಿತರು ಊರ ಒಳಗೆ ಕಾಲಿಡಬಾರದು ಎಂದು ಡಂಗೂರ ಸಾರಿದ್ದಾನೆ ಎಂದು ಸೆ. ೧೪ ರಂದು ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಲಿತ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಲ್ಲದೇ ದಲಿತರಿಗೆ ಗ್ರಾಮದೊಳಗೆ ಬರುವಂತಿಲ್ಲ ಎಂದು ಡಂಗೂರ ಸಾರಿದ್ದು, ಪರಿಸ್ಥಿತಿ ಬಿಗಾಡಯಿಸಲು ಕಾರಣವಾಗಿತ್ತು. ಸೆ. ೧೪ ರಂದು ದಲಿತ ಸಂಘಟನೆ ಮುಖಂಡರು ತೀವ್ರ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಭಾನುವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ ಜಿಲ್ಲಾಡಳಿತವೂ ಮೊದಲು ದಲಿತ ಕಾಲನಿಗೆ ಭೇಟಿ ನೀಡಿ ಅವರ ಅಹವಾಲು ಆಲಿಸಿದ್ದರು. ಬಳಿಕ ಪಂಚಾಯಿತಿ ಬಳಿ ಸವರ್ಣಿಯರನ್ನು ಸೇರಿಸಿ ಅಲ್ಲಿ ವಾತಾವರಣ ತಿಳಿಗೊಳಿಸಲು ದಲಿತ ಮುಖಂಡರನ್ನು ಬರುವಂತೆ ಆವ್ಹಾನಿಸಿದರು. ಆದರೆ, ಅಲ್ಲಿಗೆ ತಾವು ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಸವರ್ಣಿಯ ಮುಖಂಡರೇ ನಾವೇ ದಲಿತ ಕಾಲನಿಗೆ ಬರುತ್ತೇವೆ ಎಂದು ಅಲ್ಲಿಗೆ ತೆರಳಿದರು.
ಈ ವೇಳೆ ಯಾವುದೇ ವಾದ, ಪ್ರತಿವಾದಕ್ಕೆ ಇಳಿಯದೇ ಗ್ರಾಮದಲ್ಲಿ ಹಿಂದೆ ಯಾವಾಗಲೂ ಹೀಗೆ ಆಗಿರಲಿಲ್ಲ. ಏನೋ ಆಗಬಾರದ್ದು ಆಗಿ ಹೋಗಿದೆ. ಇದನ್ನು ಮುಂದುವರೆಸುವುದು ಬೇಡ. ಡಂಗೂರ ಸಾರಿದ್ದು ತಪ್ಪಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಲ್ಲರೂ ಮೊದಲಿನಂತೆ ಅನ್ಯೂನ್ಯತೆಯಿಂದ ಪರಸ್ಪರ ಸಹಕಾರದಿಂದ ಮುಂದುವರೆಯೋಣ ಎನ್ನುವ ಮನವಿಯನ್ನು ಸವರ್ಣಿಯರು ಮಾಡಿಕೊಂಡರು. ಇದಕ್ಕೆ ಎರಡು ಕಡೆಯವರು ಬಹುತೇಕ ಒಪ್ಪಿಗೆ ನೀಡಿದರು.
ಉಗಲವಾಟ ಗ್ರಾಮದಲ್ಲಿ ೧೬ ದಲಿತ ಕುಟುಂಬಗಳು ಇದ್ದು, ಅವರೆಲ್ಲರಿಗೂ ಸೂಕ್ತ ರಕ್ಷಣೆ ನೀಡಬೇಕು. ದುಡಿಯಲು ಉದ್ಯೋಗ ಕಲ್ಪಿಸಬೇಕು. ಹಲ್ಲೆ ನಡೆಸಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು. ದಲಿತ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡಬೇಕು. ಈಗಾಗಲೇ ಗ್ರಾಮದಲ್ಲಿ ನಮಗೆ ಕೂಲಿ ಕೆಲಸ ಕೊಡುವುದನ್ನು ನಿಲ್ಲಿಸಿದ್ದಾರೆ. ನಮ್ಮ ಬದುಕಿನ ಹಾಗೂ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆ ಆಗುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ದಲಿತ ಮುಖಂಡ ಫೀರಪ್ಪ ಮ್ಯಾಗೇರಿ ಸೇರಿದಂತೆ ಅನೇಕ ಮುಖಂಡರು ಒತ್ತಾಯಿಸಿದರು.
ಅರ್ಜುನ ಮಾದರ ಮೇಲೆ ಹಲ್ಲೆ, ಜಾತಿನಿಂದನೆಗೆ ಸಂಬಂಽಸಿದಂತೆ ಕೆರೂರ ಪೊಲೀಸ್ ಠಾಣೆಯಲ್ಲಿ ಒಟ್ಟು ೨೧ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ೬ ಜನರನ್ನು ಬಂಽಸಲಾಗಿದೆ. ಮಂಜುನಾಥ, ತುಳಸಿಗೇರಪ್ಪ, ಹನಮಂತ, ನಿಂಗನಗೌಡ, ಪ್ರಮೋದ ಹಾಗೂ ಒರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಽಸಿದ್ದಾರೆ.
ಇನ್ನು ಅರ್ಜುನ ಮಾದರ ಅವರು ಗ್ರಾಮದ ನಿಂಗರಡ್ಡಿ ಎನ್ನುವ ವ್ಯಕ್ತಿಗೆ ಕುಡಗೋಲಿನಿಂದ ಕಾಲಿಗೆ ಹೊಡೆದಿದ್ದು, ಇದರಿಂದ ಕಾಲಿಗೆ ಗಂಭೀರ ಗಾಯವಾಗಿದ್ದು, ಇವರು ಸಹ ತಮ್ಮ ಮೇಲೆ ಕೊಲೆಗೆ ಯತ್ನ ನಡೆಸಿದ್ದರ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಎಸ್ಪಿ ಅಮರನಾಥ ರೆಡ್ಡಿ ಅವರು ತಿಳಿಸಿದ್ದಾರೆ.
ಸವರ್ಣಿಯರಿಂದ ಹಲ್ಲೆಗೆ ಒಳಗಾದ ಅರ್ಜುನ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅರ್ಜುನ ಅವರಿಂದ ಹಲ್ಲೆಗೆ ಒಳಗಾಗಿರುವ ನಿಂಗರಡ್ಡಿ ಅವರು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಮುಂಜಾಗೃತ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.