ಟ್ಯಾಂಕರ್ ಗುದ್ದಿದ ಹೊಡೆತಕ್ಕೆ ಉರುಳಿ ಬಿದ್ದ ಬಸ್

bkt-02-11-a
ಬಸ್‌ಗೆ ಟಚ್ ಮಾಡಿದ ಟ್ಯಾಂಕರ್ ಸಹ ಜೊತೆಗೆ ಹೊಲದಲ್ಲಿ ಇಳಿದಿರುವುದು.
Published on

ಬಾಗಲಕೋಟೆ: ಪ್ರಯಾಣಿಕರು ತುಂಬಿದ್ದ ಸಾರಿಗೆ ಬಸ್ ಓವರ್ ಟೇಕ್ ಮಾಡಲು ಹೋಗಿದ್ದ ಖಾಲಿ ಇದ್ದ ಪೆಟ್ರೋಲಿಯಂ ಟ್ಯಾಂಕರ್ ತಳ್ಳಿದ ಪರಿಣಾಮ ಹೊಲದಲ್ಲಿ ಬಸ್ ಅರ್ಧಭಾಗ ಪಲ್ಟಿಯಾಗಿರುವ ಘಟನೆ ತಾಲೂಕಿನ ಹೊನ್ನಾಕಟ್ಟಿ ಕ್ರಾಸ್ ಹತ್ತಿರ ಗುರುವಾರ ಬೆಳಗ್ಗೆ ಸಂಭವಿಸಿದೆ.

ಬಸ್ ಅರ್ಧಭಾಗ ಪಲ್ಟಿಯಾಗಿದ್ದರಿಂದ ಅದೃಷ್ಟವಶಾತ್ ಬಸ್‌ನಲ್ಲಿ ಇದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಮೂವರು ಪ್ರಯಾಣಿಕರಿಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿವೆ.

ಬಾಗಲಕೋಟೆ ಸಾರಿಗೆ ಘಟಕಕ್ಕೆ ಸೇರಿದ್ದ ಬಸ್ ಬೆಣ್ಣೂರ ಗ್ರಾಮದಿಂದ ಬಾಗಲಕೋಟೆಗೆ ಬರುತ್ತಿತ್ತು. ಇದೇ ವೇಳೆ ಹಿಂದೆ ಬರುತ್ತಿದ್ದ ಪೆಟ್ರೋಲಿಯಂ ಟ್ಯಾಂಕರ್ ಚಾಲಕ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಎದುರಿಗೆ ಬೈಕ್ ಬಂದಿದ್ದರಿಂದ ಟ್ಯಾಂಕರ್ ಬಸ್ಸಿನ ಎಡಭಾಗಕ್ಕೆ ತಿಕ್ಕಿದ್ದರಿಂದ ಬಸ್ ಪಕ್ಕದ ಹೊಲದಲ್ಲಿ ಅರ್ಧ ಪಲ್ಟಿಯಾಗಿದೆ. ಬಸ್‌ನ ಜೊತೆಗೆ ಟ್ಯಾಂಕರ್ ಕೂಡ ಹೊಲದಲ್ಲಿ ಅಂಟಿಕೊಂಡೇ ಇತ್ತು.

ಬಸ್‌ನಲ್ಲಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿ ೫೦ ಜನ ಪ್ರಯಾಣಿಕರು ಇದ್ದರು. ವಾಹನ ಸಂಪೂರ್ಣ ಪಲ್ಟಿಯಾಗಿದ್ದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅರ್ಧಭಾಗ ಮಾತ್ರ ಉರಳಿದ್ದರಿಂದ ಪ್ರಯಾಣಿಕರೆಲ್ಲರೂ ಸುರಕ್ಷವಾಗಿದ್ದಾರೆ. ಬಸ್ ಉರುಳಿ ವಿಷಯ ತಿಳಿದು ಸ್ಥಳೀಯ ಸ್ಥಳಕ್ಕೆ ದೌಡಾಯಿಸಿ, ಬಸ್ಸಿನಲ್ಲಿ ಇದ್ದ ಪ್ರಯಾಣಿಕರನ್ನು ಹೊರಗಡೆ ಕರೆತಂದಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಅಪಘಾತದ ಬಗ್ಗೆ ಎಫ್ ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net