

ಮೇಲುಕೋಟೆ: ನರಕ ಚತುರ್ದಶಿಯಂದು ಮೇಲುಕೋಟೆಯಲ್ಲಿ ಟಿಪ್ಪುಸುಲ್ತಾನ್ ನಡೆಸಿದ ಹತ್ಯಾಕಾಂಡವನ್ನು ಇತಿಹಾಸದ ಪುಟಗಳಿಂದ ಅಳಿಸಲು ಸಾಧ್ಯವಿಲ್ಲ ಎಂದು ವಿದ್ವಾನ್ ರಾಮಪ್ರಿಯ ಅಭಿಪ್ರಾಯಪಟ್ಟರು.
ಹತ್ಯಾಕಾಂಡ ಖಂಡಿಸಿ ಮೇಲುಕೋಟೆಯಲ್ಲಿ ಸೋಮವಾರ ಬಿಜೆಪಿ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, 250 ವರ್ಷಗಳ ಹಿಂದೆ ಬೆಳಕಿನ ಹಬ್ಬದಂದು ಟಿಪ್ಪುಸುಲ್ತಾನ್ ಮೇಲುಕೋಟೆಯ 800 ಮಂಡಯಮ್ ಅಯ್ಯಂಗಾರ್ ಹತ್ಯೆ ಮಾಡಿದ್ದ. ಹೆಂಗಸರು, ಮಕ್ಕಳೆನ್ನದೆ ಸಿಕ್ಕ ಸಿಕ್ಕವರನ್ನು ಘೋರವಾಗಿ ಹತ್ಯೆ ಮಾಡಿದ್ದ. ಇಂತಹ ನರಮೇಧ ನಡೆಸಿದವನನ್ನು ಮೈಸೂರು ಹುಲಿ ಎಂದು ಬಿಂಬಿಸುವುದು, ಸತ್ಯ ಘಟನೆಗಳನ್ನು ಮುಚ್ಚಿಡುವುದು ಜಾತ್ಯತೀತ ಸಿದ್ಧಾಂತಕ್ಕೆ ದ್ರೋಹ ಮಾಡಿದಂತಾಗಿದೆ ಎಂದರು.
ಇತಿಹಾಸ, ನೈಜ ಸಂಗತಿಗಳನ್ನು ನಾವು ಎಂದೂ ಮರೆಯಬಾರದು. ಟಿಪ್ಪುವಿನ ಕೌರ್ಯವನ್ನು ಇಂದಿನ ಜನಾಂಗಕ್ಕೂ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಐತಿಹಾಸಿಕ ಕ್ರೌರ್ಯವನ್ನು ಖಂಡಿಸಿ ಮೇಲುಕೋಟೆಯಲ್ಲಿ ಪ್ರತಿ ವರ್ಷ ನರಕ ಚತುರ್ದಶಿಯಂದು ಪಂಜಿನ ಮೆರವಣಿಗೆ ಆಯೋಜಿಸಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಮೈಸೂರು ಆಸ್ಥಾನದಲ್ಲಿದ್ದ ಶಾಮ ಅಯ್ಯಂಗಾರ್ ಬ್ರಿಟಿಷರನ್ನು ಭೇಟಿಯಾಗಿ ಟಿಪ್ಪುವಿನ ದುರಾಡಳಿತದ ಬಗ್ಗೆ ದೂರು ನೀಡಿದ್ದರು. ಮೈಸೂರು ಮಹಾರಾಜರ ಪರವಾಗಿ ರಾಯಭಾರ ವಹಿಸುತ್ತಿದ್ದಾರೆ ಎಂಬ ಕಾರಣಕ್ಕೆ ಟಿಪ್ಪು ಮಂಡಯಮ್ ಅಯ್ಯಂಗಾರ್ ಕುಟುಂಬಗಳ ಮೇಲೆ ದಾಳಿ ಮಾಡಿದ್ದ. ನರಕ ಚತುರ್ದಶಿಯಂದು ಸೈನ್ಯದೊಡನೆ ಮೇಲುಕೋಟೆಗೆ ಲಗ್ಗೆ ಇಟ್ಟ ಟಿಪ್ಪುಸುಲ್ತಾನ್ ಸಿಕ್ಕಸಿಕ್ಕ ಮಂಡಯಮ್ ಅಯ್ಯಂಗಾರರ ಮೇಲೆ ಆಕ್ರಮಣ ಮಾಡಿ ನರಮೇಧ ನಡೆಸಿದ. ಶ್ರೀರಂಗಪಟ್ಟಣದ ಹೊರವಲಯದಲ್ಲೂ ಹತ್ಯಾಕಾಂಡ ನಡೆಯಿತು. ದೀಪಾವಳಿ ದಿನವೇ ಸ್ಮಶಾನವಾದ ಮೇಲುಕೋಟೆಯಲ್ಲಿ ಇಂದಿಗೂ ಮಂಡಯಮ್ ಜನಾಂಗದ ಕೆಲ ಕುಟುಂಬಗಳು ನರಕ ಚತುರ್ದಶಿಯನ್ನು ಶೋಕ ದಿನವನ್ನಾಗಿ ಆಚರಿಸುತ್ತಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್ ಮಾತನಾಡಿ, ನಾಡಿನಾದ್ಯಂತ ಟಿಪ್ಪು ಇಂತಹ ಹತ್ತಾರು ಕೌರ್ಯ ಎಸಗಿದ್ದಾನೆ. ಹಿಂದುಗಳ ಕಣ್ಣಲ್ಲಿ ರಕ್ತಬರುವಂತೆ ಮಾಡಿದ್ದಾನೆ. ಆದರೆ, ಟಿಪ್ಪುವನ್ನು ಸ್ವಾತಂತ್ರೃ ಹೋರಾಟಗಾರ ಎಂದು ಬಿಂಬಿಸಲಾಗುತ್ತಿದೆ. ಟಿಪ್ಪುವಿನ ಕರಾಳ ಮುಖವನ್ನು ಇಂದಿನ ಜನಾಂಗಕ್ಕೆ ತಿಳಿಸುವ ಕಾರ್ಯವನ್ನು ಮಾಡಬೇಕಾದ ಅಗತ್ಯವಿದೆ ಎಂದರು.
ಶ್ರೀಹರಿ, ಪುರಷೋತ್ತಮ್, ನಂದೀಶ್, ಭರತ್, ಮುರಳಿ, ಅಶೋಕ್ ಮತ್ತಿತರ ಮುಖಂಡರು, ನೂರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದರು. ಸೋಮವಾರ ರಾತ್ರಿ ಪಂಜುಗಳನ್ನು ಹಿಡಿದು ಟಿಪ್ಪುವಿರುದ್ಧ ಘೋಷಣೆ ಕೂಗಿದರು.