

ಶಿರಸಿ: ರೈತರ ಉತ್ಪನ್ನ ಖರೀದಿ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಇತರ ಉದ್ದೇಶಗಳಿಗೆ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಪ್ರಾರಂಭಿಸಲು ಟಿಎಸ್ಎಸ್ ನಿರ್ಧರಿಸಿದೆ.
ಸಂಘ ಮತ್ತು ಸಂಘದ ಸದಸ್ಯರಿಗೆ ಸರ್ಕಾರದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟ ಮತ್ತಿತರ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವುದು, ಹಸಿ ಅಡಕೆ ಟೆಂಡರ್, ಖರೀದಿ, ಸಂಸ್ಕರಣೆ ಮತ್ತು ಅಡಕೆಯ ಮೌಲ್ಯವರ್ಧನೆಯಿಂದ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವಂತಹ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸುಲಭವಾಗುವ ನಿಟ್ಟಿನಲ್ಲಿ ಸಂಸ್ಥೆ ಪ್ರಮುಖರು ಈ ನಿರ್ಧಾರ ಕೈಗೊಂಡಿದ್ದಾರೆ.
ರೈತರಿಗೆ ಅನುಕೂಲ ಕಲ್ಪಿಸುವ ಕೆಲ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ಸಂಘ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಕಾನೂನುಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳಿವೆ. ಆದರೆ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ಸಂಬಂಧಿಸಿದ ಕಾನೂನಿನಲ್ಲಿ ಈ ನಿಯಮಾವಳಿ ಇಲ್ಲದಿರುವುದರಿಂದ ಸಂಘದ ಯೋಜನೆಗಳ ಪ್ರಯೋಜನವನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುವುದಕ್ಕೆ ಅನುಕೂಲವಾಗಲಿದೆ.
ಕೃಷಿ ಸಂಬಂಧಿತ ಅಂದಾಜು 15,000 ಸದಸ್ಯರನ್ನು ಸಂಸ್ಥೆ ಒಳಗೊಂಡಿದ್ದು, ಎಲ್ಲರನ್ನೂ ಕಂಪನಿಗೆ ನೋಂದಣಿ ಮಾಡಲಾಗುವುದು. ಭವಿಷ್ಯದಲ್ಲಿ ಜೋಳದಿಂದ ಪಶು ಆಹಾರ ತಯಾರಿ, ಹಸಿ ಅಡಕೆ ಸಂಸ್ಕರಣೆ, ಮೌಲ್ಯವರ್ಧನೆ ಸೇರಿ ವಿವಿಧ ವಿಷಯಗಳನ್ನು ಈ ಕಂಪನಿ ಒಳಗೊಳ್ಳಲಿದೆ. ವಿವಿಧ ಯೋಜನೆಗಳು, ಸರ್ಕಾರದಿಂದ ಅನುದಾನ, ಬ್ಯಾಂಕ್ ಸಾಲಗಳಿಗೆ ಭದ್ರತೆ ಸೇರಿ ಹಲವು ಪ್ರಯೋಜನಗಳು ಕಂಪನಿ ಸದಸ್ಯರಿಗೆ ಸಿಗಲಿವೆ.
ಸಂಘವು ಪ್ರವರ್ತಕ ಸಂಸ್ಥೆಯಾಗಿದ್ದುಕೊಂಡು ಫಾರ್ಮರ್ ಪ್ರೊಡ್ಯೂಸರ್ ಕಂಪನಿಯನ್ನು ಆರಂಭಿಸಿ ಅಡಕೆ ವಹಿವಾಟು ನಡೆಸುವ ಎಲ್ಲರನ್ನೂ ಸದಸ್ಯರನ್ನಾಗಿ ಮಾಡಿಕೊಳ್ಳಲಾಗುತ್ತದೆ. ಶೀಘ್ರವೇ ಕಂಪನಿಯನ್ನು ಪ್ರಾರಂಭಿಸಲಾಗುವುದು. - ರವೀಶ ಹೆಗಡೆ- ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ