ಟಿಎಸ್​ಎಸ್​ನಿಂದ ಅಡಕೆ ನೇರ ಖರೀದಿ ಆರಂಭ

16sirsi5
Published on

ಶಿರಸಿ : ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಲಾಕ್​ಡೌನ್​ನಿಂದಾಗಿ ಮಾರುಕಟ್ಟೆ ವಹಿವಾಟುಗಳು ಸ್ಥಗಿತಗೊಂಡಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿನ ಟಿಎಸ್​ಎಸ್ ತೊಂದರೆಗೊಳಗಾದ ಸಂಸ್ಥೆಯ ಅಡಕೆ ಬೆಳೆಗಾರರಲ್ಲಿರುವ ಅಡಕೆಯ ನೇರ ಖರೀದಿ ಆರಂಭಿಸಿದೆ. ಗುರುವಾರದಿಂದ ಈ ಪ್ರಕ್ರಿಯೆ ಆರಂಭಗೊಂಡಿದ್ದು, 30 ಗ್ರಾಹಕರು ಅಡಕೆ ಮಾರಾಟ ಮಾಡಿದರು.

ಮೊದಲು ಹೆಸರು ನೋಂದಾಯಿಸಿದ 30 ಸದಸ್ಯರಿಗೆ ಅಡಕೆಯನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ನೀಡಿದ್ದು, ಮುಂಚಿತವಾಗಿ ದೂರವಾಣಿ ಮೂಲಕ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿ ಅನುಮತಿ ಪಡೆದು ಅಡಕೆಯನ್ನು ಸಂಘಕ್ಕೆ ತಂದಿದ್ದರು. ಸಂಘಕ್ಕೆ ಅಡಕೆ ತಂದ ಸದಸ್ಯರು ಸ್ಥಳೀಯ ಅನುಮತಿ ಪತ್ರ, ಹಿಡುವಳಿ ಪ್ರತಿ ಅಥವಾ ಪಹಣಿ ಪ್ರತಿಯನ್ನು ತಮ್ಮ ಜತೆ ತಂದಿದ್ದರು. ಅಲ್ಲದೆ, ಮಾರಾಟಕ್ಕೆ ಬರುವ ಸಮಯದಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿದ್ದರು. ಈ ಸಮಯದಲ್ಲಿ ಮೊದಲನೇ ದರ್ಜೆಯ ಅಡಕೆಯ ಜತೆ, ಬಿಳಿಗೋಟು ಮತ್ತು ಕೆಂಪು ಚಾಲಿ ಖರೀದಿಸಲಾಯಿತು.

ಸದ್ಯದ ಲಾಕ್​ಡೌನ್ ಪರಿಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ಸ್ತಬ್ಧವಾಗಿರುವ ಕಾರಣ ಸಾಕಷ್ಟು ರೈತರು ಅಡಕೆ ಮಾರಾಟ ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಇದೀಗ ಮಾಧ್ಯಮಿಕ ಸಾಲದ ಕಂತು ಹಾಗೂ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ ಗಡುವು ಸಮೀಪಿಸುತ್ತಿದ್ದು, ಹಣಕಾಸು ಹೊಂದಾಣಿಕೆಗಾಗಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಅಡಕೆ ವಿಕ್ರಿ ಮಾಡುವುದು ಅತ್ಯಗತ್ಯವಾಗಿದೆ. | ನರಸಿಂಹ ಹೆಗಡೆ ಅಡಕೆ ಬೆಳೆಗಾರ

ಹಳ್ಳಿಗಳ ಮಟ್ಟದಲ್ಲಿ ಸ್ಥಳಕ್ಕೆ ಹೋಗಿ ನೇರ ಖರೀದಿಗೆ ಸಹ ವ್ಯವಸ್ಥೆ ಮಾಡಲಾಗಿದ್ದು, ಟಿಎಸ್​ಎಸ್ ಸದಸ್ಯರಿರುವ ಹಳ್ಳಿಗಳಲ್ಲಿ ಕನಿಷ್ಠ 10 ಜನ ಸದಸ್ಯರು ಒಪ್ಪಿಗೆ ಸೂಚಿಸುವ ಸ್ಥಳದಲ್ಲಿ ಬಂದು ಅಡಕೆಯನ್ನು ನೇರವಾಗಿ ಖರೀದಿಸಲಾಗುವುದು. ಹಳ್ಳಿಯಲ್ಲಿ ಪ್ರತಿಯೊಂದು ಸದಸ್ಯರಿಂದ ಗರಿಷ್ಠ 4 ಕ್ವಿಂಟಾಲ್ ಮೊದಲನೆ ದರ್ಜೆಯ ಅಡಕೆಯನ್ನು ಮಾತ್ರ ಖರೀದಿಸಲಾಗುವುದು. ಈ ಬಗ್ಗೆ ಸ್ಥಳೀಯವಾಗಿ ಹಳ್ಳಿಯ ಮುಂದಾಳುಗಳು ಕಚೇರಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ವ್ಯವಸ್ಥೆಯನ್ನು ಟಿಎಸ್​ಎಸ್ ಶಿರಸಿ, ಸಿದ್ದಾಪುರ, ಯಲ್ಲಾಪುರ ಶಾಖೆಗಳಿಲ್ಲಿಯೂ ವ್ಯವಸ್ಥೆ ಮಾಡಲಾಗಿದೆ.| ಶಾಂತಾರಾಮ ಹೆಗಡೆ ಶೀಗೆಹಳ್ಳಿ ಅಧ್ಯಕ್ಷ, ಟಿಎಸ್​ಎಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net