

ಕಾರವಾರ/ಭಟ್ಕಳ: ಭಟ್ಕಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿದ್ದು, ಪಟ್ಟಣ ಕರೊನಾ ಜ್ವಾಲಾಮುಖಿಯಂತಾಗಿದೆ. ಶುಕ್ರವಾರ 3 ರಷ್ಟಿದ್ದ ರೋಗ ಪೀಡಿತರ ಸಂಖ್ಯೆ ಶನಿವಾರ 6 ಕ್ಕೇರಿದೆ. ಇನ್ನೂ 52 ಜನರಿಗೆ ಕರೊನಾ ಶಂಕೆ ಇದ್ದು, ವರದಿ ಬರುವುದು ಬಾಕಿ ಇದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತರ ಸಂಪರ್ಕಕ್ಕೆ ಬಂದ ಕೆಲವರನ್ನು ಗುರುತಿಸಿ ಗೃಹ ಬಂಧನದಲ್ಲಿರಿಸಿದ್ದಾರೆ. ಹಲವರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ ವರದಿ ಬರಲು ಇನ್ನಷ್ಟು ದಿನ ಕಾಯಬೇಕು. ಆದರೆ, ಸೋಂಕಿತರಲ್ಲಿ ಒಬ್ಬ ಸಾಮೂಹಿಕ ಪ್ರಾರ್ಥನೆ ಸೇರಿ ವಿವಿಧ ಕಾರಣಗಳಿಗೆ ಓಡಾಟ ನಡೆಸಿದ್ದು, ನೂರಾರು ಜನರ ಸಂಪರ್ಕಕ್ಕೆ ಬಂದಿದ್ದು, ಆ ಎಲ್ಲರಲ್ಲೂ ಈ ಸೋಂಕು ತಗಲುವ ಆತಂಕ ಮನೆ ಮಾಡಿದೆ.
ರೋಗ ಸಾರ್ವಜನಿಕವಾಗಿ ಹರಡುವುದನ್ನು ತಡೆಯಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಆದರೆ, ತಮಗೇನೂ ಆಗಿಲ್ಲ. ರೊಗ ಹೇಗೆ ಹರಡುತ್ತದೆ ಎಂಬ ಉಡಾಫೆಯಿಂದಲೇ ಹಲವರು ಓಡಾಡುತ್ತಿರುವುದು ಆಡಳಿತಕ್ಕೆ ಹಾಗೂ ಇತರರಿಗೂ ತಲೆನೋವಾಗಿ ಪರಿಣಮಿಸಿದೆ.
ಅರಬ್ ರಾಷ್ಟಗಳೊಂದಿಗೆ ನಂಟು, ಬಂತು ಸೋಂಕು ಭಟ್ಕಳಕ್ಕೂ ಅರಬ್ ರಾಷ್ಟ್ರಗಳಿಗೂ ನೇರ-ನಿಕಟ ಸಂಬಂಧವಿದೆ. ಹತ್ತು ಸಾವಿರಕ್ಕೂ ಅಧಿಕ ಜನರಿದ್ದಾರೆ. ಮದುವೆ, ಸಂಬಂಧ, ವ್ಯವಹಾರ ಹೀಗೆ ಸಾಮಾಜಿಕ, ಕೌಟುಂಬಿಕ ನಂಟಿವೆ. ಇವರೆಲ್ಲ ಈಗ ಭಟ್ಕಳದ ಜ್ವಾಲಾಮುಖಿಗಳಾಗಿದ್ದಾರೆ.
ಭಟ್ಕಳ ಸಂಧಿಗೊಂದಿಗಳ ಪಟ್ಟಣ. ಹಾಗೆಯೇ ಅವರ ನಡುವಳಿಕೆಗಳು ಅಷ್ಟೇ ವಿಚಿತ್ರ. ‘ಕಾನೂನು ಉಲ್ಲಂಘನೆಯೇ ನಮ್ಮ ಹಕ್ಕು’ ಎಂದು ತಿಳಿದವರು ಅಧಿಕ. ಎಲ್ಲದಕ್ಕೂ ಹಣ ಮತ್ತು ಪ್ರಭಾವದ ದೌಲತ್ತು. ಕರೊನಾ ಇದಕ್ಕೆ ಬಗ್ಗುತ್ತಿಲ್ಲ. ಇದೇ ಸಮಸ್ಯೆ ತಂದೊಡ್ಡಿದೆ. ಕರ್ನಾಟಕದಲ್ಲಿ ಬೆಂಗಳೂರಿಗಿಂತಲೂ ಅಧಿಕ ಕರೊನಾ ಸೋಂಕು ಹೊಂದಿದವರು ಇಲ್ಲಿದ್ದಾರೆ ಎನ್ನುವುದು ಈಗಾಗಲೇ ಸರ್ಕಾರಕ್ಕೆ ತಿಳಿದು ಬಂದಿದೆ.
ಯಾರ್ಯಾರಿಗೆ ಸೋಂಕು
ಪ್ರಕರಣ 1:
ದುಬೈನಿಂದ ಮುಂಬೈ ಮೂಲಕ ಬಂದು ಅಲ್ಲಿಂದ ಸಿಎಸ್ಸಿಟಿ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲಿನಲ್ಲಿ ಮಾ.20 ರಂದು ಬಂದ 65 ವರ್ಷದ ವೃದ್ಧನಲ್ಲಿ ಸೋಂಕು ಇರುವುದು ಮಾ. 23 ರಂದು ಖಚಿತವಾಗಿತ್ತು. ಆತನ 54 ವರ್ಷದ ಪತ್ನಿ, 28 ಹಾಗೂ 23 ವರ್ಷದ ಇಬ್ಬರು ಪುತ್ರಿಯರಲ್ಲೂ ಸೋಂಕು ಇರುವುದು ಶನಿವಾರ ಬೆಳಕಿಗೆ ಬಂದಿದೆ.
ಪ್ರಕರಣ 2
ಇನ್ನು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 40 ವರ್ಷದ ವ್ಯಕ್ತಿಯಲ್ಲಿ ಸೋಂಕಿರುವುದು ಮಾ.23 ರಂದು ಖಚಿತವಾಗಿತ್ತು. ಆತ ಸಂಪರ್ಕಕ್ಕೆ ಬಂದ ಸಹೋದರ, ತಾಯಿ ಮುಂತಾದವರು ಗೃಹ ಬಂಧನದಲ್ಲಿದ್ದಾರೆ.
ಪ್ರಕರಣ3:
ಕರೊನಾ ಸೋಂಕು ಇರುವುದು ಶುಕ್ರವಾರ ಖಚಿತವಾಗಿರುವ ಭಟ್ಕಳದ 22 ವರ್ಷದ ವ್ಯಕ್ತಿ ಕಾರವಾರಕ್ಕೆ ಬಂದು ಹೋಗಿದ್ದ. ಆರೋಗ್ಯ ಇಲಾಖೆ ಆತನ ಸಂಚಾರ ವಿವರ ನೀಡಿದ್ದು, ದುಬೈನಿಂದ ಮಾ. 20 ರಂದು ಗೋವಾ ದಾಂಬೋಲಿಂ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ವ್ಯಕ್ತಿ ಖಾಸಗಿ ಟ್ಯಾಕ್ಸಿ ಮೂಲಕ ಭಟ್ಕಳಕ್ಕೆ ಪ್ರಯಾಣಿಸಿದ್ದ. ಬೆಳಗ್ಗೆ 6.45 ಕ್ಕೆ ಕಾರವಾರಕ್ಕೆ ಬಂದು ಕೋಡಿಬಾಗದ ರತ್ನ ಸಾಗರ ಹೋಟೆಲ್ನಲ್ಲಿ ಚಹಾ ಕುಡಿದು 11 ಗಂಟೆಗೆ ಭಟ್ಕಳ ತಲುಪಿದ್ದ. 46 ವರ್ಷದ ತಾಯಿ, 13 ವರ್ಷದ ತಮ್ಮನ ಸಂಪರ್ಕಕ್ಕೆ ಬಂದಿದ್ದು, ಮಾ.23 ರಂದು ಜ್ವರದಿಂದ ಆಸ್ಪತ್ರೆ ಸೇರಿದ್ದ.
ಪ್ರಕರಣ ದಾಖಲು: ಭಟ್ಕಳದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೊಷಿಸಿದ ನಂತರವೂ ಅನಾವಶ್ಯಕವಾಗಿ ಚಿನ್ನದ ಪಳ್ಳಿ ಸುಲ್ತಾನ ಸ್ಟ್ರೀಟ್ ಬಳಿ ಬೈಕ್ನಲ್ಲಿ ಓಡಾಡುತ್ತಿದ್ದ ತಖಿಯಾ ಸ್ಟ್ರೀಟ್ನ ಕೆ.ಎಂ.ಶಾಝೀರ್(39) ಎಂಬ ವ್ಯಕ್ತಿಯ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಸಾರ್ವಜನಿಕ ಕರ್ತವ್ಯಕ್ಕೆ ಸರ್ಕಾರಿ ನೌಕರನಿಗೆ ಅಡ್ಡಿ, ಮಾರಕ ಕಾಯ್ದೆ ಹರಡಲು ಪ್ರಯತ್ನ, ನಿಂದನೆ, ಪ್ರಚೋದನೆ ಮುಂತಾದ ಆರೋಪ ಹೊರಿಸಲಾಗಿದೆ. ಇದೇ ರೀತಿ ಇನ್ನೂ ಇಬ್ಬರ ವಿರುದ್ಧ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಶಿವ ಪ್ರಕಾಶ ದೇವರಾಜು ತಿಳಿಸಿದ್ದಾರೆ.
ಭಟ್ಕಳದ ಜನರು ಪ್ಯಾನಿಕ್ ಆಗಬೇಕಿಲ್ಲ. ಕರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿದೆ. ಆಡಳಿತದ ಸೂಚನೆ ಪಾಲಿಸಿ ಸೋಂಕು ನಿಯಂತ್ರಿಸಬೇಕು. ಆರೋಗ್ಯ ಇಲಾಖೆ ತುರ್ತು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ. ಡಾ.ಹರೀಶ ಕುಮಾರ್ ಜಿಲ್ಲಾಧಿಕಾರಿ, ಉತ್ತರ ಕನ್ನಡ