

ಚನ್ನರಾಯಪಟ್ಟಣ: ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಪ್ರಣವ ಜ್ಯೋತಿ ಯೋಗ ಕೇಂದ್ರದ ಜ್ಯೋತಿ ನಂದೀಶ್, ಕೋಮಲಾ ಆನಂದ್ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಮಾಡಿ ಪ್ರಥಮ ಸ್ಥಾನಗಳಿಸಿದ್ದಾರೆ.
35 ರಿಂದ 45 ವರ್ಷ ವಯೋಮಾನ ಹಾಗೂ 45 ರಿಂದ 55 ವಯೋಮಾನದ ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಣವ ಜ್ಯೋತಿ ಯೋಗ ಕೇಂದ್ರದ ಗುರುಗಳಾದ ಜ್ಯೋತಿ ನಂದೀಶ್, ಕೋಮಲಾ ಆನಂದ್ ವೈಯಕ್ತಿಕ ಪಾರಿತೋಷಕ, ಮತ್ತು ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕೋಮಲಾ ಆನಂದ್ ಅವರನ್ನು ಪ್ರಣವಜ್ಯೋತಿ ಯೋಗ ಕೇಂದ್ರದಿಂದ ಸನ್ಮಾನಿಸಲಾಯಿತು. ಯೋಗ ಕೇಂದ್ರದ ಗುರುಗಳಾದ ಜ್ಯೋತಿ ನಂದೀಶ್ ಮಾತನಾಡಿ, ಕಠಿಣ ಅಭ್ಯಾಸದಿಂದ ಸಾಧನೆ ಸಾಧ್ಯ ಎಂಬುದನ್ನು ಕೋಮಲಾ ಅವರು ನಿರೂಪಿಸಿದ್ದಾರೆ. ನಮ್ಮ ಕೇಂದ್ರದಿಂದ ರಾಜ್ಯಮಟ್ಟದ ಸ್ಪರ್ಧೆಗೆ ಭಾಗವಹಿಸಿದ್ದ 5 ಸ್ಪರ್ಧಿಗಳಲ್ಲಿ ಇಬ್ಬರು ಪ್ರಥಮ ಬಹುಮಾನ ಪಡೆದರೆ, ಉಳಿದ ಮೂವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದರೊಂದಿಗೆ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಮೈಸೂರು, ಬೆಂಗಳೂರು, ಸಾಗರ, ಕಡೂರು ಸೇರಿದಂತೆ ಹಲವೆಡೆ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಕೀರ್ತಿ ತರಲಿ ಎಂದು ಹಾರೈಸಿದರು.