ಜ್ಞಾನಕ್ಕೆ ಸಮಾನವಾದುದು ಬೇರೊಂದಿಲ್ಲ

4gkn1-a-
Published on

ಗೋಕರ್ಣ: ಜ್ಞಾನಕ್ಕೆ ಸರಿಸಮವಾದುದು ಲೋಕದಲ್ಲಿ ಬೇರಾವುದೂ ಇಲ್ಲ. ದೈವರಾತರಲ್ಲಿ ಧನ ಕನಕಗಳಿರಲಿಲ್ಲ. ಐತಿಹಾಸಿಕ ಹಿನ್ನೆಲೆಯಿರಲಿಲ್ಲ. ಆದಾಗ್ಯೂ ವಿಶ್ವವೇ ಅವರನ್ನು ಅರಸುತ್ತ ಬಂದಿತು. ಇದಕ್ಕೆ ಅವರಲ್ಲಿ ಅರಳಿ ವಿಕಸಿಸಿದ್ದ ಜ್ಞಾನ ಕುಸುಮ ಸೌಗಂಧವೇ ಕಾರಣ ಎಂದು ಕಾಶಿಯ ಸ್ವಾಮಿ ಆತ್ಮಾನಂದ ನುಡಿದರು.

ಮಹರ್ಷಿ ದೈವರಾತರ 128ನೇ ಜಯಂತಿ ನಿಮಿತ್ತ ದೈವರಾತ ಸ್ಮಾರಕ ಆಶ್ರಮ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.

ದೈವರಾತರು ಮರೆಯಾಗಿ 44 ವರ್ಷಗಳ ನಂತರ ಅವ್ಯಕ್ತವಾಗಿದ್ದ ಎಲ್ಲವೂ ಈಗ ಅಶೋಕೆಯಲ್ಲಿ ಮತ್ತೆ ವ್ಯಕ್ತವಾಗುತ್ತಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ. ದೈವರಾತರ ಕನಸಿನ ಗೋಶಾಲೆ, ಪಶುಪತಿ ಮಂದಿರ ಮತ್ತು ಆಯುರ್ವೆದ ಔಷಧ ವನ ಈಗಾಗಲೇ ಇಲ್ಲಿ ಕಾರ್ಯಾರಂಭವಾಗಿವೆ. ಇದರ ಜೊತೆಗೆ ದೈವರಾತರು ಕಟ್ಟಿದ್ದ ಆಶ್ರಮ ಮತ್ತೆ ಪ್ರಾರಂಭವಾಗುತ್ತಿರುವುದು ಒಂದು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ ಎಂದರು.

ದೈವರಾತರು ಋಷಿ ಪರಂಪರೆಯ ಆಶ್ರಮದಲ್ಲಿ ಅನ್ಯರನ್ನು ಅವಲಂಬಿಸದೇ ವೇದ, ವಿದ್ಯೆಯ ಕನಸು ಕಂಡವರು. ವೇದ ಅಧ್ಯಯನದ ಜೊತೆಗೆ ನಮಗೆ ಬೇಕಾದ, ಬೇಳೆ ಕಾಳು, ತರಕಾರಿ, ಹಾಲು ಮುಂತಾದ ಆಹಾರ ವಸ್ತುಗಳನ್ನು ಆಶ್ರಮದಲ್ಲಿಯೇ ಉತ್ಪತ್ತಿ ಮಾಡುವುದು. ದೈವರಾತ ಪ್ರಣೀತ ಈ ಸ್ವಯಂ ಪೋಷಿತ ವೇದ ವಿದ್ಯಾ ಪದ್ಧತಿ ಮತ್ತೆ ಅಭಿವೃದ್ಧಿಗೊಳ್ಳುವಂತಾಗಲಿ ಎಂದು ಆತ್ಮಾನಂದರು ಹಾರೈಸಿದರು.

ಸ್ವಾಮಿ ಬ್ರಹ್ಮಾನಂದ ಮಾತನಾಡಿ, ಜ್ಞಾನ ಸಾಕ್ಷಾತ್ಕಾರಕ್ಕೆ ಚಿತ್ತ ಶುದ್ಧಿ ಕಾರಣ. ಅಂತಹ ಚಿತ್ತಶುದ್ಧಿ ಇದ್ದುದರಿಂದಲೇ ದೈವರಾತರಿಗೆ ಇಂದಿನ ಕಲಿಯುಗದಲ್ಲೂ ಸನಾತನ ಕಾಲದ ಜ್ಞಾನ ಪ್ರಾಪ್ತವಾಯಿತು. ಎಲ್ಲ ಕಾಲದಲ್ಲೂ ದೈವರಾತರ ಆದರ್ಶ ಪಾಲಿಸುವಂತಾಗಲಿ ಎಂದು ಅವರು ಹೇಳಿದರು.

ಸಭೆಯಲ್ಲಿ ಪರಿಸರ ಬರಹಗಾರ ಶಿವಾನಂದ ಕಳವೆ, ಡಾ. ಮಹೇಶ ಪಂಡಿತ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಶ್ರವ ದೈವರಾತ ಶರ್ಮ ಅಶೋಕೆಯಲ್ಲಿ ದೈವರಾತರ ಕನಸುಗಳು ಒಂದೊಂದಾಗಿ ಸಾಕಾರಗೊಳ್ಳುತ್ತಿರುವುದು ಹೆಮ್ಮೆಯ ವಿದ್ಯಮಾನವಾಗಿದೆ. ಆಶ್ರಮ ನಿರ್ವಣದಿಂದ ದೈವರಾತರ ನೆನಪು ಚಿರಸ್ಥಾಯಿಯಾಗಲಿ ಎಂದರು.

ವೇದಶ್ರವ ಶರ್ಮ ಅವರು ಬರೆದ ಜೀವದನಿ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಡಾ. ಸೌಮ್ಯಶ್ರೀ ಶರ್ಮ ಸ್ವಾಗತಿಸಿದರು. ಡಾ. ಪತಂಜಲಿ ಶರ್ಮ ಪ್ರಸ್ತಾಪಿಸಿದರು. ಶಿಕ್ಷಕಿ ಶಾರದಾ ಶರ್ಮ ಮತ್ತು ಸುಬ್ರಹ್ಮಣ್ಯ ಶರ್ಮ ನಿರ್ವಹಿಸಿದರು. ಡಾ. ಯಶಸ್ವಿನಿ ಶರ್ಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net