

ಬಾಗಲಕೋಟೆ: ಆತ್ಮವಿಶ್ವಾಸದ ಮಂಡನೆ ರೂಡಿಸಿಕೊಳ್ಳಲು ಕಾನೂನಿನ ಸಂಪೂರ್ಣ ಜ್ಞಾನ,ಉತ್ತಮ ಭಾಷೆ, ಮತ್ತು ಪರಿಶ್ರಮ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ .ಕೃಷ್ಣ ಭಟ್ ಹೇಳಿದರು.
ನಗರದ ಬಸವೇಶ್ವರ ಇಳಜನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಆಯೋಜಿಸಿದ ಕಾನೂನು ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನದ ಬಲವಿಲ್ಲದಿದ್ದರೆ ಇಂದು ಏನನ್ನು ಸಾಧಿಸಲಾಗುವುದಿಲ್ಲ, ಭಾಷೆ ಮತ್ತು ಜ್ಞಾನವನ್ನು ಸಮತೂಕದಲ್ಲಿ ಬಳಸುವುದನ್ನು ರೂಡಿಸಿಕೊಳ್ಳಬೇಕು, ಯಶಸ್ವಿ ವಕೀಲರಾಗಬೇಕಾದರೆ ಕಾನೂನಿನ ಆಳವಾದ ಜ್ಞಾನ,ನೈಜತೆಯೊಂದಿಗೆ ವಾಸ್ತವಿಕತೆಯನ್ನು ತಿಳಿದುಕೊಂಡು ಪರಿಣಾಮಕಾರಿಯಾಗಿ ಮನವರಿಕೆಮಾಡಿ ಕೊಡುವುದನ್ನು ಕಲಿಯಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ, ಸಮಾಜದಲ್ಲಿ ಎಬಿವಿಪಿಯ ರಚನಾತ್ಮಕ ಕೆಲಸವನ್ನು ಶ್ಲಾಘಿಸಿದರು,ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯ ಮೇಲು ಚೆನ್ನಾಗಿ ಪ್ರಭುತ್ವ ಸಾಧಿಸಿಕೊಂಡು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿ ಮುಂದಿನ ಕಾನೂನು ಜೀವನದ ದೊಡ್ಡ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿರಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಕೀಲರಾದವರು ವಿವಿಧ ವಿಷಯಗಳ ಸಮಗ್ರ ಜ್ಞಾನದೊಂದಿಗೆ ಆತ್ಮವಿಶ್ವಾಸದಿಂದ ನ್ಯಾಯಮೂರ್ತಿಗಳಿಗೆ ಕಕ್ಷಿದಾರರ ವಿಷಯಗಳನ್ನು ಉತ್ತಮ ಭಾಷೆ ಮತ್ತು ಜ್ಞಾನದೊಂದಿಗೆ ಮನವರಿಕೆ ಮಾಡಿಕೊಡುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಡೀನ್ ಡಾ. ಬಿ .ಎಮ್. ಕುಬಕಡ್ಡಿ ಅವರು ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿ ಪರಿಷತ್ತಿನ ಜವಾಬ್ದಾರಿಯಾಗಿದೆ, ವಿದ್ಯಾರ್ಥಿಗಳು ಕೇವಲ ವಕೀಲಕಿ ವೃತ್ತಿಯನ್ನು ಕಾರ್ಯನಿರ್ವಹಿಸುವುದಲ್ಲದೆ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಶ್ರಮ ವಹಿಸಬೇಕು, ಸಮಾಜದಲ್ಲಿ ಮೇಲು ಕೀಳೆಂಬ ಭಾವನೆಯನ್ನು ಹೋಗಲಾಡಿಸಿ ಪರಸ್ಪರ ಗೌರವ ಮತ್ತು ಶಿಸ್ತನ್ನು ತರುವಲ್ಲಿ ಪ್ರಯತ್ನಿಸಬೇಕು, ಮೂಲಭೂತ ಕರ್ತವ್ಯಗಳನ್ನು ಮಾಡಬೇಕಾಗಿರುವುದು ಇಂದಿನ ಅವಶ್ಯ ಎಂದು ನುಡಿದರು.
ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶ್ರೀಮತಿ ಚಂದ್ರಿಕಾ ಕುರಂದ್ವಾಡ ಅವರು ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ದೊಡ್ಡದಿದೆ, ಭಾರತ ಸರ್ಕಾರದ ಆಶಯದ ಕೌಶಲ್ಯಗಳ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸುವಲ್ಲಿ ಇಂದಿನ ಪ್ರತಿಭಾವಂತ ವಿದ್ಯಾರ್ಥಿಗಳ ಪಾತ್ರ ಮತ್ತು ಅವಶ್ಯಕತೆ ಬಹಳಷ್ಟು ಇದೆ, ಎಂದು ನುಡಿದರು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಣಿಕಂಠ ಕಳಸ ಎಬಿವಿಪಿ ನಡೆದು ಬಂದ ದಾರಿ ಹಾಗೂ ಕಾನೂನು ಸಮ್ಮೇಳನದ ಕುರಿತು ಪ್ರಾಸ್ತಾವಿಕವಾಗಿ ಮಾತುಗಳಾಡಿದರು. ಸಮ್ಮೇಳನದ ವಿದ್ಯಾರ್ಥಿ ಸಂಚಾಲಕ ಶ್ರೀ ಸಚಿನ್ ಕುಳಗೇರಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಕು. ಐಶ್ವರ್ಯ ಬಾನಿ ಮತ್ತು ಅನುಷಾ ದೇಶಪಾಂಡೆ ಪ್ರಾರಂಭದಲ್ಲಿ ಪ್ರಾರ್ಥಿಸಿದರು, ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹನುಮಂತ ನಿರಾಣಿ,ಆರ್ ಎಸ್ ಎಸ್ ಮಾನ್ಯ ಸಂಘ ಚಾಲಕರಾದ ಡಾ.ಸಿ ಎಸ್ ಪಾಟೀಲ್ ,ರಾಜ್ಯ ನ್ಯಾಯವಾದಿಗಳಾದ ಶ್ರೀ ಅನುಪ್ ದೇಶಪಾಂಡೆ ,ಶ್ರೀ ಶೌರಿ, ಎಬಿವಿಪಿಯ ಪ್ರಾಂತ ಸಂ.ಕಾರ್ಯದರ್ಶಿ ಶ್ರೀ ಪ್ರಥ್ವಿ ಕುಮಾರ್, ಶ್ರೀ ಎಚ್ ಡಿ ಪಾಟೀಲ್, ಗಂಗಾಧರ ಹಂಜಗಿ, ವಕೀಲರಾದ ಪ್ರಶಾಂತ್ ಪವಾರ್ ಪ್ರೊ ,ವಿ.ಪಿ.ಗಿರಿಸಾಗರ್, ಡಾ.ಆರ್.ಎಂ. ಕುಲಕರ್ಣಿ, ಪ್ರೊ.ಮಂಜುನಾಥ ಶಿರೂರ ಡಾ.ಬಸವರಾಜ ಕುಂಬಾರ ,ರಾಜ್ಯದ ವಿವಿಧ ಕಾನೂನು ಕಾಲೇಜುಗಳಿಂದ ಸುಮಾರು ೩೦೦ ಕಾನೂನು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.