

ಕಾರವಾರ: ಸಾಕಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಹೋಟೆಗಾಳಿಯ ಭೀಮಕೋಲದ ಗೋಪಿಚಂದ ರತ್ನಾಕರ ಪಡುವಳಕರ್ ಎಂಬಾತನನ್ನು 6 ತಿಂಗಳವರೆಗೆ ಪಕ್ಕದ ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 20 ರಂದು ಈ ಆದೇಶ ಹೊರಬಿದ್ದಿದೆ.
ಆತನ ವಿರುದ್ಧ 1998 ರಿಂದ ಇದುವರೆಗೆ 1 ಕೊಲೆ, 1 ಕೊಲೆಗೆ ಪ್ರಯತ್ನ, 5 ದೈಹಿಕ ಹಲ್ಲೆ ,3 ಜೀವದ ಬೆದರಿಕೆ, 16 ಅಬಕಾರಿ ಪ್ರಕರಣ ಹಾಗೂ 1 ಇತರ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಆತ ಒಟ್ಟು 27 ಪ್ರಕರಣಗಳಲ್ಲಿ 131 ದಿನ ನ್ಯಾಯಾಂಗ ಬಂಧನದಲ್ಲಿದ್ದ ಎನ್ನಲಾಗಿದೆ. 2019 ರಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ 1 ತಿಂಗಳ ಧಾರವಾಡ ಜೈಲಿಗೆ ಕಳಿಸಲಾಗಿತ್ತು. ಆದರೂ ಬಿಡುಗಡೆಯಾಗಿ ಬಂದ ನಂತರ ಆತ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ಆತ ಸಮಾಜಕ್ಕೆ ಹಾಗೂ ಸ್ವತ್ತಿಗೆ ಅಪಾಯಕಾರಿಯಾಗುವ ಸಾಧ್ಯತೆ ಇರುವುದರಿಂದ ಆತನನ್ನು ಗಡಿಪಾರು ಮಾಡಲು ಶಿಫಾರಸು ಮಾಡಲಾಗಿತ್ತು ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.