

ಕಲಬುರಗಿ: ಜೈನ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕಲಬುರಗಿ ಜಿಲ್ಲಾ ಜೈನ್ ಯುವ ವೇದಿಕೆ ಅಧ್ಯಕ್ಷ ಸುರೇಶ ತಂಗಾ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಈ ಸಮುದಾಯದ ಯಾವುದೇ ಬೇಡಿಕೆ ಈಡೇರಿಸಿಲ್ಲ. ಪ್ರತ್ಯೇಕ ನಿಗಮದ ಭರವಸೆ ಹುಸಿಯಾಗಿದ್ದು, ಸಮುದಾಯಕ್ಕೆ ನೋವು ತಂದಿದೆ ಎಂದರು.
ಅಲ್ಪಸAಖ್ಯಾತರ ಕಲ್ಯಾಣ ಇಲಾಖೆ ಅಡಿ ಬರುವ ಜೈನ್ ಸಮುದಾಯಕ್ಕೆ ನಿರೀಕ್ಷಿತ ಮಟ್ಟದ ಅನುದಾನ ನೀಡಿಲ್ಲ. ಹೀಗಾಗಿ ೨೫-೩೦ ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು. ಹೆಚ್ಚಿನ ಅನುದಾನ ನೀಡುವುದರ ಜತೆಗೆ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಜೈನ್ ಧರ್ಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಸ್ಯಾಹಾರಿ ಪ್ರತ್ಯೇಕ ವಸತಿ ನಿಲಯ ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಆದರೂ, ಸರ್ಕಾರ ಸ್ಪಂದಿಸುತ್ತಿಲ್ಲ. ಈ ಧರ್ಮದಲ್ಲೂ ಸಾಕಷ್ಟು ಬಡವರಿದ್ದು, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ನೋವಿನಿಂದ ನುಡಿದರು.
ಬಜೆಟ್ ಅಧಿವೇನ ಇನ್ನೂ ನಡೆಯುತ್ತಿದ್ದು, ಈ ಅವಧಿಯಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜೇಂದ್ರ ಕುಣಚಗಿ, ಶ್ರೇಣಿಕ್ ಪಾಟೀಲ್, ರಾಹುಲ್ ಕುಂಬಾರೆ, ಧರಣೇಂದ್ರ ಸಂಗಮಿ, ರಮೇಶ ಬೆಳಕೇರಿ, ಚೇತನ ಪಂಡಿತ ಇತರರಿದ್ದರು.