

ಚನ್ನರಾಯಪಟ್ಟಣ: ಶ್ರವಣಬೆಳಗೊಳದ ಜೈನ ಮಠದ ಚಾವುಂಡರಾಯ ಸಭಾ ಮಂಟಪದಲ್ಲಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಆಷಾಢ ಮಾಸದ ಅಷ್ಟಾನಿಕ ಪರ್ವದ ನಿಮಿತ್ತ ಶ್ರೀ ಸಿದ್ಧಚಕ್ರ ಮಹಾಮಂಡಲ ಆರಾಧನೆಯ 2ನೇ ದಿನವಾದ ಮಂಗಳವಾರ ಕಲ್ಪದ್ರುಮ ಅಭಿಷೇಕ ನೆರವೇರಿತು.
ಮಂಗಳ ವಾದ್ಯಗಳೊಂದಿಗೆ ಬೆಳ್ಳಿ ಪಲ್ಲಕ್ಕಿಯಲ್ಲಿ 24 ತೀಥರ್ಂಕರರು ಹಾಗೂ ಪಂಚ ಪರಮೇಷ್ಟಿಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಭಂಡಾರ ಬಸದಿಯ ಸುತ್ತ ಮೆರವಣಿಗೆ ಮಾಡಲಾಯಿತು. ನಂತರ ನೀರು, ಎಳನೀರು, ಹಾಲು, ಶ್ರೀಗಂಧ ಹಾಗೂ ಪುಷ್ಪವೃಷ್ಟಿಯೊಂದಿಗೆ ಚವ್ವೀಸ ತೀಥರ್ಂಕರರಿಗೆ ಕಲ್ಪದ್ರುಮ ಅಭಿಷೇಕ ನೆರವೇರಿಸಲಾಯಿತು.
ಯುಗಲ ಮುನಿಶ್ರೀ ಅಮೋಘಕೀರ್ತಿ ಮಹಾರಾಜರು, ಅಮರಕೀರ್ತಿ ಮಹಾರಾಜರು, ಪಾವನಕೀರ್ತಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಗಣನಿ ಆರ್ಯಿಕಾ ಕೀರ್ತಿಮತಿ ಮಾತಾಜಿ ಹಾಗೂ ಸಂಘ, ಆರ್ಯಿಕಾ ಶಿವಮತಿ ಮಾತಾಜಿ, ಆರ್ಯಿಕಾ ನಿರ್ಮಲಮತಿ ಮಾತಾಜಿ ಉಪಸ್ಥಿತರಿದ್ದರು.
ಎಸ್.ಪಿ.ನಂದಕುಮಾರ್ ಶಾಸ್ತ್ರಿ, ಪ್ರತಿಷ್ಠಾಚಾರ್ಯ ಎಸ್.ಪಿ.ಜಿನೇಶ್‌ಕುಮಾರ್, ಪ್ರೇಮಕುಮಾರ್ ಪೂಜಾ ವಿಧಿ-ವಿಧಾನದ ನೇತೃತ್ವ ವಹಿಸಿದ್ದರು. ಹೊರನಾಡಿನ ಜಯಶ್ರೀ ಮತ್ತು ತಂಡದವರು ಜಿನ ಭಕ್ತಿಸ್ತುತಿ ನಡೆಸಿಕೊಟ್ಟರು.