

ಪಾಂಡವಪುರ: ವರ್ಣ ನಿಂದನೆ ಮಾಡಿರುವ ಸಚಿವ ಜಮೀರ್ ಅಹಮದ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಸಚಿವ ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಐದು ದೀಪದ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ಇಂತಹ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಜಮೀರ್ ಅಹಮದ್ ಅವರು ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಹಾಗೂ ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡಿನೀಯ. ಎಚ್.ಡಿ.ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಕೀಳಾಗಿ ಮಾತನಾಡುವುದಲ್ಲದೆ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬವನ್ನೇ ಹಣದಿಂದ ಕೊಂಡುಕೊಳ್ಳುವುದಾಗಿ ಹೇಳಿರುವುದು ಸರಿಯಲ್ಲ. ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತ ಕೇಳುವ ಹಕ್ಕು ಇದೆ. ಅದನ್ನು ಬಿಟ್ಟು ಮತ್ತೊಬ್ಬರ ಮೈ ಬಣ್ಣದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಜಮೀರ್ ಅಹಮದ್ ಮಾಜಿ ಪಿಎಂ ಎಚ್.ಡಿ.ದೇವೇಗೌಡರ ಗರಡಿಯಲ್ಲಿಯೇ ಬೆಳೆದು, ಅವರ ಕುಟುಂಬವನ್ನೇ ಕೊಂಡುಕೊಳ್ಳುವಷ್ಟರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರೆ ಜಮೀರ್ ಎಷ್ಟು ಹಣ ಇಟ್ಟಿದ್ದಾರೆ. ಹಾಗಾದರೆ ರಾಜ್ಯದಲ್ಲಿರುವ ಎಲ್ಲ ಒಕ್ಕಲಿಗರನ್ನು ಕೊಂಡುಕೊಳ್ಳುತ್ತಾರಾ? ಹಗುರವಾಗಿ ಮಾತನಾಡಿರುವ ಅವರನ್ನು ಸಚಿವ ಸಂಪುಟದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅಧ್ಯಕ್ಷ ಧನಂಜಯ್ ಮಾತನಾಡಿ, ಸಚಿವ ಜಮೀರ್ ಅಹಮದ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಉಲ್ಲೇಖ ಮಾಡಿ ಅವಮಾನ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಕುಟುಂಬವನ್ನು ಕೊಂಡುಕೊಳ್ಳುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೆ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ರಾಮಕೃಷ್ಣ, ಹಳೇಬೀಡು ಗ್ರಾಪಂ ಅಧ್ಯಕ್ಷ ಧನಂಜಯ್, ಮುಖಂಡರಾದ ಪಿ.ಎಸ್.ಲಿಂಗರಾಜು, ಹೊಸಕೋಟೆ ಪುಟ್ಟಣ್ಣ, ಚಿಕ್ಕಾಡೆ ರಾಜಪ್ಪ, ಬಿ.ಎಸ್.ಜಯರಾಮು, ಶಿವಕುಮಾರ್, ರವಿಕರ, ಮಾಣಿಕ್ಯನಹಳ್ಳಿ ಅಶೋಕ್, ಮಂಚೇಗೌಡ, ಅಶ್ವತ್ಥ್ ಕುಮಾರೇಗೌಡ, ಸಿದ್ದೇಗೌಡ, ಚಿಕ್ಕಮರಳಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ, ಕೆ.ಎಲ್. ಆನಂದ್, ಚಿಕ್ಕಣ್ಣ, ಚಿಕ್ಕಮರಳಿ ನವೀನ್ ಇತರರು ಇದ್ದರು.