ಜೆಎಸ್‌ಡಬ್ಲ್ಯು ಗ್ರೂಪ್‌ಗೆ ಕೇಣಿ ಬಂದರು ಟೆಂಡರ್‌ ..?

12KWR2
Published on

ಸುಭಾಸ ಧೂಪದಹೊಂಡ ಕಾರವಾರ
ಅಂಕೋಲಾ ತಾಲೂಕಿನ ಕೇಣಿ ಗ್ರೀನ್‌ಫೀಲ್ಡ್ ಬಂದರು ನಿರ್ಮಾಣಕ್ಕೆ ಗ್ಲೋಬಲ್ ಟೆಂಡರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಜೆಎಸ್‌ಡಬ್ಲು ಇನ್‌ಫ್ರಾಸ್ಟ್ರಕ್ವರ್‌ ಪ್ರೈವೇಟ್‌ ಲಿಮಿಟೆಡ್ ಗುತ್ತಿಗೆ ಪಡೆಯುವ ಸಾಧ್ಯತೆ ಹೆಚ್ಚಿದೆ.
ಒಟ್ಟು 2,783 ಕೋಟಿ ರೂ. ಅಂದಾಜು ವೆಚ್ಚದ ಈ ಬಂದರು ನಿರ್ಮಾಣಕ್ಕೆ ಕರ್ನಾಟಕ ಮೆರಿಟೈಮ್ ಬೋರ್ಡ್ ಮೊದಲೆರಡು ಬಾರಿ ಗ್ಲೋಬಲ್ ಟೆಂಡರ್ ಕರೆದಾಗ ಯಾರೂ ಬಿಡ್‌ನಲ್ಲಿ ಭಾಗವಹಿಸಿರಲಿಲ್ಲ. 2022 ರ ಸೆಪ್ಟೆಂಬರ್‌ನಲ್ಲಿ ಮೂರನೇ ಬಾರಿಗೆ ಟೆಂಡರ್ ಕರೆದಾಗ ಸಜ್ಜನ್ ಜಿಂದಾಲ್ ಅವರ ನೇತೃತ್ವದ ಜೆಎಸ್‌ಡಬ್ಲು ಕಂಪನಿ ಮಾತ್ರ ಆಸಕ್ತಿ ತೋರಿ ಟೆಂಡರ್‌ನಲ್ಲಿ ಭಾಗವಹಿಸಿದೆ. ಆನಿವಾರ್ಯವಾಗಿ ಆ ಕಂಪನಿಗೇ ಟೆಂಡರ್ ನೀಡುವ ಸಾಧ್ಯತೆ ಹೆಚ್ಚಿದೆ. ಆದರೂ ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಅಂತಿಮ ತೀರ್ಮಾನವಾಗಬೇಕಿದೆ ಎಂದು ಮೆರಿಟೈಮ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾಗರಮಾಲಾ ಯೋಜನೆ:
ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಕೇಣಿ ಹಾಗೂ ಪಾವಿನಕುರ್ವೆಯಲ್ಲಿ ಪಬ್ಲಿಕ್, ಪ್ರೈವೇಟ್‌ ಪಾರ್ಟನರ್‌ಶಿಪ್-ಪಿಪಿಪಿ ಮಾದರಿಯಲ್ಲಿ ಬಂದರು ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧವಾಗಿತ್ತು. 2022 ರ ರಾಜ್ಯ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸಲಾಗಿತ್ತು. 2022 ರ ಏಪ್ರೀಲ್‌ನಲ್ಲಿ ಕರ್ನಾಟಕ ಸರ್ಕಾರ ಬಂದರು ನಿರ್ಮಾಣಕ್ಕೆ ತಾತ್ವಿಕ ಅನುಮೋದನೆ ನೀಡಿತ್ತು. ನಂತರ ಮೆರಿಟೈಮ್ ಬೋರ್ಡ್ ಸಿಇಒ ಕಪಿಲ್ ಮೋಹನ್ ಸ್ಥಳ ಪರಿಶೀಲನೆ ನಡೆಸಿದ್ದರು.
ಯೋಜನೆ, ನಿರ್ಮಾಣ, ನಿರ್ವಹಣೆ ಹಂಸ್ತಾಂತರ (ಡಿಬಿಎಫ್‌ಒಟಿ) ಮಾದರಿಯಲ್ಲಿ 30 ವರ್ಷಕ್ಕೆ ಖಾಸಗಿ ಕಂಪನಿಗೆ ಬಂದರು ನಿರ್ಮಿಸಿ , ನಿರ್ವಹಿಸುವ ಯೋಜನೆ ರೂಪಿಸಲಾಗಿದೆ. ಪ್ರತಿ ಮೆಟ್ರಿಕ್ ಟನ್‌ಗೆ ಅತಿ ಹೆಚ್ಚು ರಾಜಧನ ನೀಡುವವರಿಗೆ ಬಂದರು ಗುತ್ತಿಗೆ ನೀಡಲು ಬೋರ್ಡ್ ತೀರ್ಮಾನಿಸಿತ್ತು. ಆದರೆ, ಈಗ ಒಬ್ಬರೆ ಬಿಡ್‌ದಾರರಿರುವುದು ಚರ್ಚೆಗೆ ಕಾರಣವಾಗಿದೆ.
ಗ್ರೀನ್‌ಫೀಲ್ಡ್ ಪೋರ್ಟ್ ನಿರ್ಮಾಣವಾದ ನಂತರ ವರ್ಷಕ್ಕೆ 3 ಮಿಲಿಯನ್ ಟನ್ ಉಷ್ಣ ವಿದ್ಯುತ್ ಕಲ್ಲಿದ್ದಲು, ಹಾಗೂ 12 ರಿಂದ 17 ಮುಲಿಯನ್ ಟನ್ ಅಡುಗೆ ಕಲ್ಲಿದ್ದಲನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ಪ್ರಾಥಮಿಕವಾಗಿ 2,783 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಬೇಕಿದ್ದು, 225 ಕೋಟಿ ರೂ.ಗಳನ್ನು ಇತರ ಮೂಲ ಸೌಕರ್ಯ ನಿರ್ಮಾಣಕ್ಕೆ ವಿನಿಯೋಗಿಸಬೇಕಿದೆ ಎಂದು ಎಂದು ಪ್ರಾಥಮಿಕ ಹಂತದಲ್ಲಿ ಅಂದಾಜಿಸಲಾಗಿದೆ.
ಪಾವಿನಕುರ್ವಾ ಬಂದರಿಗೆ ಆಸಕ್ತರಿಲ್ಲ
ಪಾವಿನಕುರ್ವಾದಲ್ಲೂ ಪಿಪಿಪಿ ಮಾದರಿಯಲ್ಲಿ ಬಂದರು ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದರೂ ಅದಕ್ಕೆ ಯಾರೂ ಆಸಕ್ತಿ ತೋರಿ, ಟೆಂಡರ್‌ನಲ್ಲಿ ಭಾಗವಹಿಸಿಲ್ಲ. ಸಿಆರ್‌ಜಡ್ ಅನುಮತಿ ಪಡೆಯುವುದು, ಭೂ ಸ್ವಾಧೀನ, ರೈಲ್ವೆ ಸಂಪರ್ಕ, ರಸ್ತೆ ಸಂಪರ್ಕ ಮುಂತಾದ ಕಾರ್ಯಗಳನ್ನು ಗುತ್ತಿಗೆದಾರರೇ ನೋಡಿಕೊಳ್ಳಬೇಕಿದೆ. ಪರಿಸರ ವಿಷಯದಲ್ಲಿ ಹಾಗೂ ಸ್ಥಳೀಯರಿಂದ ಸಾಕಷ್ಟು ಪ್ರತಿಭಟನೆಗಳನ್ನು ಎದುರಿಸಬೇಕಾಗಿರುವುದರಿಂದ ಶಿಪ್ಪಿಂಗ್ ಕ್ಷೇತ್ರದಲ್ಲಿ ಪ್ರಸಿದ್ಧವಾಗಿರುವ ಭಾರತೀಯ ಕಂಪನಿಗಳು ಆಸಕ್ತಿ ತೋರುತ್ತಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕೇಣಿಯಲ್ಲಿ ಪಿಪಿಪಿ ಮಾದರಿಯಲ್ಲಿ ಬಂದರು ನಿರ್ಮಾಣಕ್ಕೆ ಮೂರನೇ ಬಾರಿ ಗ್ಲೋಬಲ್ ಟೆಂಡರ್ ಕರೆಯಲಾಗಿತ್ತು. ಈ ಬಾರಿ ಒಂದು ಕಂಪನಿ ಮಾತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ಯಾವ ಕಂಪನಿಗೆ ಟೆಂಡರ್ ನೀಡಬೇಕು ಎಂಬ ಬಗ್ಗೆ ಇನ್ನಷ್ಟೇ ಚರ್ಚೆ ನಡೆಯಬೇಕಿದೆ. ಇನ್ನೂ ಪ್ರಕ್ರಿಯೆಗಳು ಪೂರ್ಣವಾಗಿಲ್ಲ.
ಕ್ಯಾಪ್ಟನ್ ಸಿ.ಸ್ವಾಮಿ
ಬಂದರು ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net