

ಬಾಗಲಕೋಟೆ: ನವನಗರದ ಸೆಕ್ಟರ ನಂ.43ರಲ್ಲಿರುವ ಆದರ್ಶ ಶಾಲೆಯಲ್ಲಿ ಮೆದುಳು ಜ್ವರದ ವಿರುದ್ದ ಹಮ್ಮಿಕೊಂಡ 1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿರುವ ಜೆಇ ಲಸಿಕಾ ಅಭಿಯಾನಕ್ಕೆ ಶಾಸಕ ವೀರಣ್ಣ ಚರಂತಿಮಠ ಸೋಮವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜೆಇ ಲಸಿಕಾ ಅಭಿಯಾನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೆದುಳು ಜ್ವರ ಒಂದು ಮಾರಣಾಂತಿಕ ರೋಗವಾಗಿದ್ದು, ಇದರಿಂದ ಮುಕ್ತ ಹೊಂದಲು ಲಸಿಕೆ ರಾಮ ಬಾಣವಾಗಿದೆ. ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇರುವದಿಲ್ಲ. ಆದ್ದರಿಂದ ಮಕ್ಕಳ ಪೋಷಕರು ಲಸಿಕೆ ಹಾಕಿಸಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ 1 ರಿಂದ 15 ವರ್ಷದೊಳಗಿನ ಒಟ್ಟು 5.77 ಲಕ್ಷ ಮಕ್ಕಳಿಗೆ ಜೆಇ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಯಾವುದೇ ಮಕ್ಕಳು ಈ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಮಿಕ, ವೈದ್ಯಕೀಯ ಶಿಕ್ಷಣ ಇಲಾಖೆ ಸಹಕಾರ ಪಡೆಯಲು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಾವಿತ್ರಿ ಕೊಂಡಗೋಳಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಬಿ.ಜಿ.ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಡಿಎಲ್‍ಓ ಎಸ್.ಜಿ.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.