ಜು.8ರಂದು ಲೋಕ ಆದಾಲತ್

Published on

ಪಾಂಡವಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜುಲೈ 8ರಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ನಡೆಯುವ ಬೃಹತ್ ಲೋಕ ಆದಾಲತ್(ಜನತಾ ನ್ಯಾಯಾಲಯ) ನಲ್ಲಿ ರಾಜಿ ಸಂಧಾನಕ್ಕೆ ಯೋಗ್ಯವಾಗಿರುವ ಚಾಲ್ತಿ ಪ್ರಕರಣಗಳನ್ನು ಕಕ್ಷಿದಾರರು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ತಿಳಿಸಿದರು.


ಜನತಾ ನ್ಯಾಯಾಲಯದ ವಿಚಾರವನ್ನು ಪ್ರತಿಯೊಬ್ಬ ನಾಗರಿಕರು ಮತ್ತು ಕಕ್ಷಿದಾರರು ತಿಳಿಯಬೇಕಿದೆ. ಈ ನ್ಯಾಯಾಲಯದಲ್ಲಿ ಎಲ್ಲ ರೀತಿಯ ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಮೋಟಾರು ವಾಹನ ಅಪಘಾತ, ಚೆಕ್ ಬೌನ್ಸ್, ಜೀವನಾಂಶ, ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರಗಳು ಇದರ ವ್ಯಾಪ್ತಿಗೆ ಬರುತ್ತದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಕೆಲ ರಾಜಿಗೆ ಯೋಗ್ಯವಾದ ಪ್ರಕರಣಗಳನ್ನು ಬಗೆಹರಿಸಬಹುದಾಗಿದೆ. ಪ್ರತಿಯೊಬ್ಬ ಕಕ್ಷಿದಾರರು ರಾಜಿ ಸಂಧಾನದಿಂದಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳಬೇಕು. ಕೇಸ್‌ಗಳು ಮುಂದುವರಿದರೆ ನ್ಯಾಯಾಲಯಕ್ಕೆ ಅಲೆಯುವುದು ಮತ್ತು ಮೇಲ್ಮನವಿಗಳಿಂದ ವ್ಯಥರ್ ಖರ್ಚುಗಳನ್ನು ಉಳಿಸಬಹುದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


ಜನತಾ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದು ಕೆಳ ನ್ಯಾಯಾಲಯದ ಹಂತದಲ್ಲೇ ಸಮಾಪ್ತಿಗೊಳ್ಳುತ್ತದೆ. ಆದರೆ, ತೀರ್ಪು ನೀಡುವ ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಅಫೀಲು ಸಲ್ಲಿಸುವ ಅವಕಾಶಗಳಿವೆ. ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾಗುವುದು ಶುಲ್ಕ ಸಂಪೂರ್ಣ ಮರುಪಾವತಿಯಾಗುತ್ತದೆ. ತೀರ್ಪಿನಲ್ಲಿ ಅಂತ್ಯವಾಗುವ ಪ್ರಕರಣಗಳಿಂದ ಮನಸ್ತಾಪ, ದ್ವೇಷ, ಅಸೂಯೆ ಹಾಗೂ ಸಂಬಂಧಗಳು ಹದಗೆಡುತ್ತವೆ. ಕಕ್ಷಿದಾರರು ರಾಜಿ ಸಂಧಾನಕ್ಕೆ ಮುಂದೆ ಬಂದು ರಾಜಿಯಾದರೆ ಈ ಎಲ್ಲ ಸಮಸ್ಯೆಗಳು ಉದ್ಭವಿಸುವುದಿಲ್ಲ. ಸಾಮಾಜಿಕ ಸಾಮರಸ್ಯ ಉಳಿಯುತ್ತದೆ ಎಂದರು.


7617 ಪ್ರಕರಣಗಳು ಬಾಕಿ: ಜೆಎಂಎಫ್‌ಸಿ ನ್ಯಾಯಾಲಯದ ಐದು ನ್ಯಾಯಾಲಯಗಳಲ್ಲಿ 7617 ಪ್ರಕರಣಗಳು ಬಾಕಿ ಉಳಿದಿದ್ದು, ಇದರಲ್ಲಿ 2 ಸಾವಿರ ಪ್ರಕರಣಗಳನ್ನು ರಾಜಿಗೆ ಯೋಗ್ಯವಾದ ಪ್ರಕರಣಗಳೆಂದು ಗುರುತಿಸಲಾಗಿದೆ. ಇದಕ್ಕೆ ಇನ್ನೂ ಹೆಚ್ಚಿನ ಪ್ರಕರಣಗಳು ಸೇರುವ ಸಾಧ್ಯತೆ ಇದೆ. ಕಳೆದ ವರ್ಷ 1941 ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇಡಲಾಗಿತ್ತು. ಈ ಪೈಕಿ 389 ಚಾಲ್ತಿ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಪಾಂಡವಪುರ ನ್ಯಾಯಾಲಯ ಕಳೆದ ಬಾರಿಯ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದಿತ್ತು. ಈ ಬಾರಿ ಮೊದಲ ಸ್ಥಾನ ಪಡೆಯಲು ವಕೀಲರು ಸಹಕಾರ ನೀಡಲಿದ್ದಾರೆ ಎಂದರು.
ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಂಜುನಾಥ್, ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ, 1ನೇ ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಕಿಶೋರ್‌ಕುಮಾರ್, 2ನೇ ಅಪರ ಸಿವಿಲ್ ನ್ಯಾಯಾಧೀಶೆ ಪದ್ಮಾ, ವಕೀಲರ ಸಂಘದ ಕಾರ್ಯದರ್ಶಿ ನಾಗರಾಜು, ಸಿಬ್ಬಂದಿ ಮಂಚಯ್ಯ, ಮನು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net