

ಸಿದ್ದಾಪುರ: ಲಾಕ್ ಡೌನ್ ಮಾಡಿರುವುದರಿಂದ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳಬೇಕಾಗಿದ್ದು ಅಂಗಡಿಕಾರರು ಹಾಗೂ ತರಕಾರಿ ವ್ಯಾಪಾರಸ್ಥರು ಜನರ ಜೀವನಾವಶ್ಯಕ ವಸ್ತುಗಳನ್ನು ಮನೆ ಮನೆಗೆ ನೀಡಲು ಸಿದ್ಧರಾಗಬೇಕೆಂದು ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಪಟ್ಟಣದ ಕಿರಾಣಿ ಹಾಗೂ ತರಕಾರಿ ವ್ಯಾಪಾರಸ್ಥರ ಹಾಗೂ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸದ್ಯ ಸಂಜೆ 4ರಿಂದ ರಾತ್ರಿ 8ರವರೆಗೆ ಕಿರಾಣಿ ಹಾಗೂ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ದಿನಸಿ ಸಾಮಾನುಗಳು ಹಾಗೂ ಪಶು ಆಹಾರವನ್ನು ಗ್ರಾಹಕರಿಗೆ ನೀಡಬೇಕಾಗಿದೆ. ಇವುಗಳನ್ನು ಮುಂದಿನ ಎರಡು ಮೂರು ದಿನದಲ್ಲಿ ಮನೆ ಮನೆಗೆ ಹೋಗಿ ನೀಡಬೇಕಾಗುತ್ತದೆ ಎಂದು ತಹಸೀಲ್ದಾರರು ಸೂಚಿಸಿದರು.
ನಮಗೆ ದಿನಸಿ ಸಾಮಾನುಗಳು ಹುಬ್ಬಳ್ಳಿಯಿಂದ ಬರಬೇಕಾಗಿದ್ದು ಅದನ್ನು ತರಿಸುವುದಕ್ಕೆ ಅನುಮತಿ ನೀಡಬೇಕು ಹಾಗೂ ವಾಹನ ಹೋಗುವುದಕ್ಕೆ ಅವಕಾಶ ನೀಡಬೇಕು ಎಂದು ಕಿರಾಣಿ ಹಾಗೂ ತರಕಾರಿ ವ್ಯಾಪಾರಸ್ಥರು ವಿನಂತಿಸಿದರು.
ವಾಹನದ ನಂಬರ್ ಕೊಡಿ ಅದಕ್ಕೆ ಅನುಮತಿ ನೀಡುತ್ತೇವೆ ಎಂದು ತಹಸೀಲ್ದಾರ್ ಹೇಳಿದರು. ತರಕಾರಿ ವ್ಯಾಪಾರಸ್ಥರು ಪಪಂ ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಎಂದು ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ತಿಳಿಸಿದರು.
ಸಿಪಿಐ ಪ್ರಕಾಶ ಉಪಸ್ಥಿತರಿದ್ದರು. ತಾಲೂಕು ವಣಿಕ ಸಂಘದ ಅಧ್ಯಕ್ಷ ಪ್ರಕಾಶ ಹುಲೇಕಲ್ ಸೇರಿ ಇಪ್ಪತ್ತಕ್ಕೂ ಹೆಚ್ಚು ವ್ಯಾಪಾರಸ್ಥರಿದ್ದರು.
ಜ್ವರ ಚಿಕಿತ್ಸೆ ಘಟಕ: ಸಿದ್ದಾಪುರ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯ ಹೊರ ಆವರಣದಲ್ಲಿ ಗುರುವಾರದಿಂದ ಜ್ವರ ಚಿಕಿತ್ಸೆ ಘಟಕವನ್ನು ಆರಂಭಿಸಲಾಗಿದೆ. ದೇಶದೆಲ್ಲಡೆ ಕರೊನಾ ವೈರಸ್ ಹರಿಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಕೇವಲ ಜ್ವರ, ಕೆಮ್ಮು, ನೆಗಡಿ ಇದ್ದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು. ಇಂದು 15 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ, ಆಸ್ಪತ್ರೆಯ ಒಳಗೆ ಎರಡು ಕರೊನಾ ರೂಂ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ ಅವರು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಂಜುಳಾ ಭಜಂತ್ರಿ ಹಾಗೂ ತಾಪಂ ಇಒ ಪ್ರಶಾಂತರಾವ್ ಅವರಿಗೆ ಮಾಹಿತಿ ನೀಡಿದರು. ಡಾ. ಶ್ರೀನಿವಾಸ್, ಡಾ.ರಾಘವೇಂದ್ರ ಉಡುಪ, ಡಾ.ಲೋಕೇಶ, ಡಾ.ನಾಡಿಗೇರ್, ಡಾ.ಶ್ರೀಪ್ರಿಯಾ ಇದ್ದರು.