

ಬಾಗಲಕೋಟೆ: ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರ ಜೀವನವು ಗಾಳಿಪಟ ಇದ್ದಂತೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕೋಟೆನಾಡಿನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವ-೨೦೨೩ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಳಿಪಟಕ್ಕೆ ಗಾಳಿ ಮತ್ತು ಬಾಲಂಗೋಸಿ ಸಮನಾಗಿದ್ದಾಗ ಮಾತ್ರ ಬಾನಂಗಳದಲ್ಲಿ ಹಾರಾಟ ಮಾಡುತ್ತದೆ. ಆಕಾಶದಲ್ಲಿ ಸ್ವಚ್ಛಂದ ಚಲ್ಲಾಟ ನೋಡುಗರ ಕಣ್ಮನ ಸೆಳೆಯುತ್ತದೆ. ಅದರಂತೆ ಮನುಷ್ಯ ಜೀವನದಲ್ಲಿ ಸುಖ, ಶಾಂತಿ, ಶಕ್ತಿ ಇದ್ದಾಗ ಎತ್ತರೆತ್ತರಕ್ಕೆ ಬೆಳೆದು ನಿಲ್ಲುತ್ತದೆ. ಯಾವುದಾದರೂ ಬಿರುಗಾಳಿ ಬಿಟ್ಟಾಗ ಬಾಲಂಗೋಸಿ ಮತ್ತು ದಾರ ಹರಿದು ಪಟ ನೆಲಕ್ಕುಳುಳಿದಂತೆ ಜೀವನದಲ್ಲಿಯೂ ಇಂತಹ ಪರಿಸ್ಥಿತಿ ಉಂಟಾಗಿರುವ ಉದಾಹರಣೆಗಳಿವೆ ಎಂದರು.
ವಿ.ಪ ಪಿ.ಎಚ್.ಪೂಜಾರ ಮಾತನಾಡಿ, ಭಾರತ ದೇಶದಾದ್ಯಂತ ನಾನಾ ರಾಜ್ಯದಲ್ಲಿ ಹವಾಮಾನಕ್ಕನುಗುಣವಾಗಿ ಗಾಳಿಪಟ ಉತ್ಸವಗಳು ನಡೆಯುತ್ತವೆ. ಈ ಗಾಳಿಪಟ ಕ್ರೀಡೆ ಭಾರತ ದೇಶಕ್ಕೆ ಅನಾದಿಕಾಲದಿಂದಲೂ ಬಂದಿದ್ದು, ಮೈಮನ ಹಗುರಾಗಿ ಮನಸ್ಸಿಗೆ ಮನ ಮುದ ನೀಡುವ ಕ್ರೀಡೆ ಇದಾಗಿದೆ ಎಂದು ಹೇಳಿದರು.
ಕಾಮದೇನು ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ನಾವು ಚಿಕ್ಕವರಿದ್ದಾಗ ಗಾಳಿಪಟ ಹಾರಿಸಿದ ನೆನಪು ಮೇಲು ಹಾಕಿದೆ ಗಾಳಿಪಟ ಉತ್ಸವ. ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಗುಜರಾತನಲ್ಲಿ ಗಾಳಿಟಪ ಉತ್ಸವವನ್ನು ಅದ್ದೂರಿಯಾಗಿ ಆಯೋಜನೆ ಮಾಡಿದ್ದರು. ಅದೇ ರೀತಿ ಬಾಗಲಕೋಟೆಯಲ್ಲಿ ಗಾಳಿಪಟ ಉತ್ಸವ ನಡೆಯುತ್ತಿರುವುದು ಸಂತರ ಸಂತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಯುವ ಮುಖಂಡ ಸಂತೋಷ ಹೊಕ್ರಾಣಿ, ರಕ್ಷಿತಾ ಭರತಕುಮಾರ ಈಟಿ ಮಾತನಾಡಿದರು. ವೇದಿಕೆ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಎಎಪಿ ಮುಖಂಡ ರಮೇಶ ಬದ್ನೂರ, ನಗರಸಭೆ ಉಪಾದ್ಯಕ್ಷ ಬಸವರಾಜ ಅವರಾದಿ, ರಾಜ್ಯ ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ವೀಣಾ ಕಾಶಪ್ಪನವರ, ಭಾರತೀಯ ಗಾಳಿಪಟ ಸಮಿತಿಯ ಸಂಸ್ಥಾಪಕ ಸಂದೇಶ ಕಡ್ಡಿ, ನಗರಸಭೆ ಮಾಜಿ ಉಪಾಧ್ಯಕ್ಷ ಶರಣಪ್ಪ ಗುಳೇದ ಸೇರಿದಂತೆ ಇತರರು ಇದ್ದರು.