ಜೀವನದಲ್ಲಿ ದಿನನಿತ್ಯ ಯೋಗ ಅವಶ್ಯ

bkt-21-4 a
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
Published on

ಬಾಗಲಕೋಟೆ: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದ ಇರಲು ಯೋಗ ಮುಖ್ಯವಾಗಿದ್ದು, ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸದೃಡವಾಗಿರಲು ಸಾದ್ಯವೆಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗವು ಆಯುರ್ವೇದದ ಅವಿಭಾಜ್ಯ ಅಂಗವಾಗಿದ್ದು, ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡಿ ಆತಂಕ ದೂರವಾಗುತ್ತದೆ. ಮನಸ್ಸು, ಶರೀರ, ಆತ್ಮ ಒಂದೂ ಗೂಡುವುದೇ ಯೋಗ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಯೋಗ ಎಲ್ಲರನ್ನು ಒಂದುಗೂಡಿಸುವ ಅಂಶವಾಗಿದೆ. ನಮ್ಮ ದೇಹ, ಮನಸ್ಸು ನಿರ್ವಹಣೆಗೆ ಯಾವುದೇ ಔಷಧಿಗಳಿಲ್ಲದೇ ಪ್ರತಿನಿತ್ಯ ಮಾಡುವ ಕಾರ್ಯಗಳ ತರಹ ಯೋಗವನ್ನು ಕೂಡಾ ಮನಸ್ಸಿಟ್ಟು ಮಾಡಿದರೆ, ಖಂಡಿತ ಲಾಭ ದೊರೆಯಲಿದೆ. ಸ್ವಯಂ ಪ್ರೇರಿತರಾಗಿ ಎಲ್ಲರೂ ಯೋಗವನ್ನು ದಿನನಿತ್ಯದ ಜೀವನ ಶೈಲಿಯಾಗಿ ಅಳವಡಿಸಿಕೊಳ್ಳಿ, ನಿಮ್ಮ ಸುತ್ತಮುತ್ತಲಿನವರಿಗೂ ಯೋಗದ ಮಹತ್ವ ತಿಳಿಸುವ ಜೊತೆಗೆ ಆಧುನಿಕ ಜೀವನ ಶೈಲಿಯಿಂದ ದೂರವಿದ್ದು, ಉತ್ತಮ ಜೀವನದತ್ತ ಹೆಜ್ಜೆ ಹಾಕಬೇಗಿದೆ. ಈ ಗಳಿಗೆಗೆ ಮಾತ್ರ ಯೋಗ ಸೀಮಿತಿವಾಗಿರದೆ, ದಿನನಿತ್ಯ ಅಳವಡಿಸಿಕೊಳ್ಳಲು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ ಅಧಿಕಾರಿ ಡಾ.ಅಕ್ಕಮಹಾದೇವಿ ಗಾಣಿಗೇರ ಅವರು ಯೋಗ ಶಾಸ್ತ್ರವು ಆಯುಷ್ ಇಲಾಖೆಯ ಒಂದು ಅವಿಭಾಜ್ಯ ಅಂಗವಾಗಿದ್ದು, ಯೋಗ ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಯೋಗ ವೆಂದರೆ ಶರೀರ, ಮನಸ್ಸು ಹಾಗೂ ಆತ್ಮ ಒಂದು ಗೂಡಿಸುವುದಾಗಿದೆ. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಯೋಗ ಶಾಸ್ತ್ರವು ಸಹಾಯಕವಾಗಿದೆ. ಜೂನ್-21ನೇ ದಿವಸವು ಎಲ್ಲ 365 ದಿವಸಗಳಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ಸುಧೀರ್ಘವಾಗಿ ಸಂಪೂರ್ಣವಾಗಿ ಪಸರಿಸುತ್ತವೆ. ಈ ದಿನದಂದು ಅಂತರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹುನಗುಂದ ಆಯುರ್ವೇಶ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ವಂದಿಸಿದರು. ಶಿಕ್ಷಕ ಹುಚ್ಚೇಶ ಲಾಯದಗುಂದಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net