ಜೀವನ ಪ್ರೀತಿಯ, ಪ್ರೀತಿಯ ಜೀವನದ ಹರಿಕಾರ ಪ್ರಮೋದ

25 ylp 01 (pramod hegde)
Published on

ಯಲ್ಲಾಪುರ: ಆಧುನಿಕ ಸಮಾಜಕ್ಕೆ ಬೇಕಾದ ಪ್ರೀತಿಯ ಬುತ್ತಿಯನ್ನು ಕಟ್ಟಿಕೊಟ್ಟ ಜೀವನ ಪ್ರೀತಿಯ, ಪ್ರೀತಿಯ ಜೀವನದ ಹರಿಕಾರ ಪ್ರಮೋದ ಹೆಗಡೆ ಎಂದು ವಿದ್ಯಾ ವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೆಕೈ ಹೇಳಿದರು.

    ಅವರು ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ 70 ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು. ಪ್ರಮೋದ ಹೆಗಡೆ ತಮಗಾಗಿ ಆಸ್ತಿ ಮಾಡಲಿಲ್ಲ, ಅವರೇ ಜಿಲ್ಲೆಯ ಆಸ್ತಿಯಾದರು. ಚುನಾವಣೆಯಲ್ಲಿ ಆಯ್ಕೆಯಾಗುವಲ್ಲಿ ಸೋತರೂ, ಪ್ರೀತಿಯಿಂದ ಎಲ್ಲರ ಹೃದಯವನ್ನು ಗೆದ್ದಿದ್ದಾರೆ ಎಂದರು.

   ಕಾರ್ಯಕ್ರಮ ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ರಾಜಕೀಯದ ಗುಣ ಧರ್ಮದಲ್ಲಿ ವ್ಯತ್ಯಾಸ ಹೊಂದಿದವರೊಂದಿಗೂ ಪ್ರಮೋದ ಹೆಗಡೆ ಉತ್ತಮ ಸ್ನೇಹ ಹೊಂದಿದ್ದಾರೆ ಎಂದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಮೋದ ಹೆಗಡೆ ರಾಜಕೀಯದಲ್ಲಿ ಸ್ಥಾನ ಪಡೆಯದೇ ಹೋದರೂ, ತತ್ವ, ಸಿದ್ಧಾಂತಗಳನ್ನು ಬಿಡದೇ ಮೌಲ್ಯಾಧಾರಿತ ರಾಜಕಾರಣ ಮಾಡಿ ಮಾದರಿಯಾಗಿದ್ದಾರೆ ಎಂದರು.

   ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಪೂರಕವಾಗಿ ಬದುಕಿದವರನ್ನು ಸಮಾಜ ಗುರುತಿಸಿ, ಗೌರವಿಸುವ ಈ ಕಾರ್ಯ ಶ್ಲಾಘನೀಯ ಎಂದರು. ಅಭಿನಂದನೆ ಸ್ವೀಕರಿಸಿದ ಪ್ರಮೋದ ಹೆಗಡೆ, ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದರು. ಪ್ರಮೋದ ಹೆಗಡೆ ಅವರ ಕುರಿತು ಹೊರತರಲಾದ 'ಸಾರ್ಥಕ ಸಂಕಲ್ಪ' ಅಭಿನಂದನಾ ಗ್ರಂಥವನ್ನು ಮಾಜಿ ಸಚಿವ ಎಚ್.ಕೆ.ಪಾಟೀಲ ಬಿಡುಗಡೆಗೊಳಿಸಿದರು. ಪದ್ಮಾ ಪ್ರಮೋದ ಹೆಗಡೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶಾಸಕ ದಿನಕರ ಶೆಟ್ಟಿ, ಅಭಿನಂದನಾ ಗ್ರಂಥದ ಸಂಪಾದಕ ಕಾಶ್ಯಪ ಪರ್ಣಕುಟಿ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ ಇತರರಿದ್ದರು. 

  ಅಭಿನಂದನಾ ಸಮಿತಿಯ ಪ್ರಮುಖರಾದ ಎಸ್.ಪಿ.ಶೆಟ್ಟಿ, ವಿಜಯ ಹೆಗಡೆ ದೊಡ್ಮನೆ, ನಾಗರಾಜ ಹೆಗಡೆ ಕವಲಕ್ಕಿ, ಡಿ.ಶಂಕರ ಭಟ್ಟ, ಪ್ರಸಾದ ಹೆಗಡೆ, ಸಿ.ಜಿ.ಹೆಗಡೆ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ ಸಂಘ-ಸಂಸ್ಥೆಗಳ ಪ್ರಮುಖರು, ಅಭಿಮಾನಿಗಳು ಪ್ರಮೋದ ಹೆಗಡೆ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net