ಜಿಲ್ಲೆಯಾದ್ಯಂತ ಹಬ್ಬಿದ ಕಬ್ಬಿನ ಕಿಚ್ಚು !

BKT-17-11
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು. ನಾಲ್ಕು ಮಾರ್ಗಗಳಲ್ಲಿ ನೂರಾರು ವಾಹನಗಳು ನಿಂತು
Published on

ಬಾಗಲಕೋಟೆ: ಕಬ್ಬು ಬೆಳೆಗಾರರ ಆಕ್ರೋಶದ ಕಟ್ಟೆಯೊಡೆದ ಪರಿಣಾಮ ಗುರುವಾರ ಅನ್ನದಾತರ ಹೋರಾಟದ ಕಿಚ್ಚು ಮುಧೋಳ ನಗರದಿಂದ ಇಡೀ ಬಾಗಲಕೋಟೆ ಜಿಲ್ಲೆಯಾದ್ಯಂತ ವ್ಯಾಪಿಸಿದೆ.
೨ನೇ ದಿನವೂ ಮುಧೋಳ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದ್ದ ಬಂದಗೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಜಿಲ್ಲೆಯಲ್ಲಿ ಅತ್ಯಂತ ಜನ ಮತ್ತು ವಾಹನ ದಟ್ಟನೆ ಇರುವ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಸಂಪೂರ್ಣ ಬಂದ್ ಮಾಡಲಾಗಿತ್ತು.
ಬಾಣಾಪುರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ೨೧೮ನ್ನು ಬಂದ್ ಮಾಡಿದ್ದರು. ಇದರಿಂದ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಮುಧೋಳ-ಜಮಖಂಡಿ ಮಾರ್ಗಗಳಿಗೆ ಸಂಚರಿಸುವ ಸಾವಿರಾರು ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಹೀಗಾಗಿ ಗದ್ದನಕೇರಿ ಕ್ರಾಸ್ ನಿಂದ ತೆರಳುವ ನಾಲ್ಕು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿತ್ತು. ಪರಿಣಾಮ ಸಾವಿರಾರು ಪ್ರಯಾಣಿಕರಿಗೆ ಪ್ರತಿಭಟನೆ ಬಿಸಿ ತಟ್ಟಿತು.
ಬೆಳಗ್ಗೆ ೯ ಗಂಟೆಯಿಂದಲೇ ಬಂದ್ ಆಗಿದ್ದ ಹೆದ್ದಾರಿಗಳನ್ನು ತೆರವುಗೊಳಿಸಲು ಪೊಲೀಸರು, ಜಿಲ್ಲಾಡಳಿತ ಸಾಕಷ್ಟು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೋರ್ಟ, ಕಚೇರಿ, ಬ್ಯಾಂಕ್, ಆಸ್ಪತ್ರೆ, ವಿವಿಧ ಇಲಾಖೆ ನೌಕರರು ನಿಗದಿತ ವೇಳೆಗೆ ಕಚೇರಿ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ತೀವ್ರ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು. ಆ್ಯಂಬುಲೆನ್ಸï ಗಳಿಗೆ ಬಿಡಲಾಗುತ್ತಿತ್ತಾದರೂ ಎಲ್ಲ ಮಾರ್ಗಗಳಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ನಿಂತಿದ್ದರಿಂದ ಅವುಗಳನ್ನು ದಾಟಿಕೊಂಡು ಹೊರಹೋಗಲು ತೊಂದರೆ ಅನುಭವಿಸುವ ಪ್ರಸಂಗವೂ ನಡೆಯಿತು. ಮಧ್ಯಾಹ್ನ ೨ ಗಂಟೆವರೆಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಾಗೆಯೆ ಬೀಳಗಿ ಭಾಗದ ರೈತರು ಅನಗವಾಡಿ ಸೇತುವೆ ಬಳಿ ಪ್ರತಿಭಟನೆ ನಡೆಸಿದ್ದರಿಂದ ಅಲ್ಲಿಯೂ ಸಹ ಕಿ.ಮೀ.ಗಟ್ಟಲೆ ಉದ್ದ ವಾಹನಗಳು ನಿಂತಿದ್ದವು. ರೈತರ ಪ್ರತಿಭಟನೆ ವಿರೋಧಿಸಲು ಆಗದೇ ಅನೇಕ ಪ್ರಯಾಣಿಕರು ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಮುಧೋಳ ತಾಲೂಕಿನ ವಿವಿಧ ಗ್ರಾಮಗಳಲ್ಲೂ ಪ್ರತಿಭಟನೆ ವ್ಯಾಪಿಸಿದ್ದಲ್ಲದೇ ರಬಕವಿ-ಬನಹಟ್ಟಿ, ಬೀಳಗಿ, ಬಾದಾಮಿ ತಾಲೂಕುಗಳಲ್ಲೂ ಕಬ್ಬು ಬೆಳೆಗಾರರು ಹೋರಾಟ ನಡೆಸಿದರು. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ರನ್ನ ಸಕ್ಕರೆ ಕಾರ್ಖಾನೆ ಮಾದರಿಯಲ್ಲಿ ೨೯೦೦ ರೂ. ದರ ಕೊಡಲೇಬೇಕು. ಸರ್ಕಾರ ಸಕ್ಕರೆ ಫ್ಯಾಕ್ಟರಿಗಳಿಗೆ ಸೊಪ್ಪುಹಾಕದೇ ರೈತರಿಗೆ ನ್ಯಾಯ ಕೊಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇನ್ನು ಬಾದಾಮಿ ತಾಲೂಕಿನಲ್ಲಿರು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ಎಂ.ಆರ್.ಎನ್. ಕಾರ್ಖಾನೆ ಕಡೆಗೆ ತೆರಳಿದ ರೈತರು ಕಾರ್ಖಾನೆ ಬಂದ್ ಮಾಡುವಂತೆ ಒತ್ತಾಯಿಸಿದರು. ೨೯೦೦ ರೂ. ಗೆ ಒಪ್ಪದೇ ಕಾರ್ಖಾನೆಯಲ್ಲಿ ಕಬ್ಬು ನುರಿಸುವಂತಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಕಾರ್ಖಾನೆ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕುಮಕಿಯೂ ನಡೆಯಿತು.
ಗದ್ದನಕೇರಿ ಕ್ರಾಸ್ ನಲ್ಲಿ ನಡೆದ ಪ್ರತಿಭಟನೆ ಬಿಸಿ ಜೋರಾಗಿಯೇ ತಟ್ಟಿದ್ದರಿಂದ ಕೊನೆಗೆ ಮಧ್ಯಾಹ್ನ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಕೊನೆಗೆ ರೈತರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ರೈತರ ಹೋರಾಟದ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಸಂಜೆ ಒಳಗೆ ತೀರ್ಮಾನ ಬರುವ ನಿರೀಕ್ಷೆ ಇದ್ದು, ಅದನ್ನು ರೈತ ಮುಖಂಡರಿಗೆ ತಿಳಿಸುತ್ತೇವೆ. ರೈತರು ಶಾಂತತೆ ಕಾಯ್ದುಕೊಳ್ಳಬೇಕು. ಸದ್ಯ ಹೆದ್ದಾರಿ ಬಂದ್ ತೆರವುಗೊಳಿಸುವಂತೆ ಮಾಡಿದ ಮನವಿಗೆ ರೈತರು ಸ್ಪಂದಿಸಿದರು. ಮಧ್ಯಾಹ್ನ ೨.೩೦ರ ಬಳಿಕ ವಾಹನ ಸಂಚಾರ ಪುನಾರಂಭವಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net