

ರಾಮನಗರ : ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಖರೀದಿ ಕೇಂದ್ರವನ್ನು ಆರಂಭಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ನೋಂದಾಯಿತ ರೈತರಿಂದ ರಾಗಿ ಖರೀದಿಗೆ ಮಾ.1 ರಿಂದ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಖರೀದಿ ಕೇಂದ್ರದ ಅಧಿಕಾರಿಗಳು ಮತ್ತು ಅಸ್ಸೇಯರ್‌ಗಳು ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಬೇಕು. ಕಳಪೆ ಗುಣಮಟ್ಟದ ರಾಗಿಯನ್ನು ಖರೀದಿಸಿದರೆ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ರಾಗಿ ಖರೀದಿ ಕೆಂದ್ರಗಳಲ್ಲಿ ದಲ್ಲಾಳಿಗಳಿಗೆ ಅವಕಾಶವಿರುವುದಿಲ್ಲ. ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ಗಳಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುವುದು. ರೈತರ ಯಾವುದೇ ದೂರುಗಳು, ಸಮಸ್ಯೆಗಳಿದ್ದರೆ ಆಯಾ ತಾಲೂಕಿನ ತಹಸೀಲ್ದಾರ್, ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಖರೀದಿ ಕೇಂದ್ರಗಳಲ್ಲಿ ರೈತರನ್ನು ಹೊರತುಪಡಿಸಿ ಇತರೆ ಜನ ಅಥವಾ ದಲ್ಲಾಳಿ ಅಥವಾ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಲಿ ರಮ್ಯಾ ಇತರರು ಇದ್ದರು.
ಖರೀದಿ ಕೇಂದ್ರಗಳ ವಿವರ ಇಂತಿದೆ: ಚನ್ನಪಟ್ಟಣ ತಾಲೂಕು: ಕೆಎಫ್‌ಸಿಎಸ್‌ಸಿ ಚನ್ನಪಟ್ಟಣ ಸಗಟು ಮಳಿಗೆ, ಜಾನಪದ ಲೋಕದ ಎದುರು, ಬಿ.ಎಂ.ರಸ್ತೆ, ಚನ್ನಪಟ್ಟಣ., ಕನಕಪುರ ತಾಲೂಕು: ಎ.ಪಿ.ಎಂ.ಸಿ.ಗೋದಾಮು, ಕನಕಪುರ ಬೈಪಾಸ್ ರಸ್ತೆ, ಕನಕಪುರ. ಹಾರೋಹಳ್ಳಿ ತಾಲೂಕು. ವರದಯ್ಯ ಗೋದಾಮು, ನಂ.16 ಮಾರಸಂದ್ರ, ಹಾರೋಹಳ್ಳಿ ತಾಲೂಕು. ಮಾಗಡಿ ತಾಲೂಕು ಜವಾಹರ್ ಅಹಮದ್ ಗೋದಾಮು, ಬಸ್ ನಿಲ್ದಾಣದ ಹತ್ತಿರ, ಸೋಲೂರು, ಮಾಗಡಿ ತಾಲೂಕು. ರಾಮನಗರ ತಾಲೂಕು ಕೆ.ಎಫ್.ಸಿ.ಎಸ್.ಸಿ.ರಾಮನಗರ ಸಗಟು ಮಳಿಗೆ-ಜಾನಪದ ಲೋಕದ ಎದುರು, ಬಿ.ಎಂ.ರಸ್ತೆ, ರಾಮನಗರ.