ಜಿಲ್ಲೆಯಲ್ಲಿ ಮಳೆ ಇಳಿಮುಖ

12 joida 01..
Published on

ಕಾರವಾರ: ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಆಗೊಂದು ಈಗೊಂದು ಮಳೆ ಬಂದು ಮಾಯವಾಗುತ್ತಿದೆ.

ಬುಧವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 20, ಭಟ್ಕಳ- 36, ಹಳಿಯಾಳ- 16.4, ಹೊನ್ನಾವರ- 33.7, ಕಾರವಾರ- 12.1, ಕುಮಟಾ- 29.8, ಮುಂಡಗೋಡ- 4.6, ಸಿದ್ದಾಪುರ- 27.2, ಶಿರಸಿ- 32.5, ಜೊಯಿಡಾ- 31.4, ಯಲ್ಲಾಪುರದಲ್ಲಿ 25.4, ಮಿಮೀ ಮಳೆಯಾಗಿದೆ.

ಕದ್ರಾ ಜಲಾಶಯಕ್ಕೆ 16995 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 15078 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆ ಮಾಡಿ ಹೊರಬಿಡಲಾಗುತ್ತಿದೆ. ಸೂಪಾಕ್ಕೆ 24542 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

882 ಹೆಕ್ಟೇರ್ ಬೆಳೆ ಹಾನಿ: ನೆರೆ ಇಳಿದಿದ್ದು, ಜನ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ ಇದುವರೆಗೆ ಪ್ರವಾಹದಿಂದ 36 ಗ್ರಾಮಗಳು ತೊಂದರೆಗೀಡಾಗಿವೆ. 14 ಮನೆಗಳಿಗೆ ತೀವ್ರತರದ ಹಾನಿಯಾಗಿದೆ. 271 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 345 ಹೆಕ್ಟೇರ್ ಕೃಷಿ ಹಾಗೂ 537 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಅಡಕೆ ತೋಟ ಕುಸಿದು ಹಾನಿ: ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಮರಡಾದಲ್ಲಿ ಭಾರಿ ಮಳೆಗೆ ಅಡಕೆ ತೋಟ ಕುಸಿದು ಅಪಾರ ಹಾನಿಯಾಗಿದೆ.

ಆರ್.ವಿ. ದಾನಗೇರಿ ಅವರಿಗೆ ಸೇರಿದ ಸುಮಾರು ಒಂದು ಎಕರೆ ಅಡಕೆ ತೋಟ ಕುಸಿದು ಕಾರಣ ಫಲಸು ತುಂಬಿದ್ದ 500 ಕ್ಕೂ ಹೆಚ್ಚು ಅಡಕೆ ಮರಗಳು ನೆಲಕ್ಕುರುಳಿವೆ. ಕಳೆದ ವರ್ಷವೂ ಇಲ್ಲಿ ಭಾರಿ ಭೂ ಕುಸಿತವಾಗಿ ತೋಟಕ್ಕೆ ಹಾನಿಯಾಗಿತ್ತು. ಈಗ ಅಡಕೆಯ ಜೊತೆಗೆ ಬಾಳೆ, ಕಾಳು ಮೆಣಸು, ಕೊಕೊ, ವೆನಿಲ್ಲಾ ಬೆಳೆಗಳೂ ಹಾನಿಯಾಗಿದೆ. ಅಡಕೆ ತೋಟ ಅತಿವೃಷ್ಟಿಯಿಂದಾಗಿ ಕುಸಿದು ಲಕ್ಷಾಂತರ ಹಾನಿಯಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ಮತ್ತು ತೋಟಗಾರಿಕಾ ಇಲಾಖೆಗೆ ಮನವಿ ನೀಡಿದ್ದೇವೆ. ಸರ್ಕಾರದ ಸಹಾಯ ನಿರೀಕ್ಷೆಯಲ್ಲಿ ನಾವಿದ್ದೇವೆ ಎನ್ನುತ್ತಾರೆ ದಾನಗೇರಿ ಅವರು. ಈ ಕುರಿತು ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಬ್ದುಲ್ ದಳವಾಯಿ, ಹಾನಿಗೊಳಗಾದ ತೋಟಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲಿಸಿ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net