

ಕಾರವಾರ: ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ನು ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಸರ್ಕಾರ ತುರ್ತು ಎಂದು ಘೊಷಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಆ ನಿಯಮ ಉಲ್ಲಂಘನೆಯಾದರೆ ತಹಸೀಲ್ದಾರರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಎಚ್ಚರಿಸಿದ್ದಾರೆ.
ದ್ರೋಣ್ ಕಾರ್ಯಾಚರಣೆ: ಜಿಲ್ಲೆಯ ದಾಂಡೇಲಿ, ಶಿರಸಿ, ಭಟ್ಕಳ, ಕಾರವಾರ ಹಾಗೂ ಯಲ್ಲಾಪುರದಲ್ಲೂ ಲಾಕ್ಡೌನ್ ವೀಕ್ಷಣೆಗೆ ದ್ರೋಣ್ ಕ್ಯಾಮರಾಗಳನ್ನು ಪೊಲೀಸರು ಬಳಸಿದ್ದಾರೆ. ಇದರಿಂದ ಜನ ಸೇರಿರುವ ಪ್ರದೇಶಗಳನ್ನು ಪತ್ತೆ ಹಚ್ಚಿ ಅವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
100 ಕಾರ್ವಿುಕರಿಗೆ ಆಶ್ರಯ: ಲಾಕ್ಡೌನಿಂದ ತೊಂದರೆಗೆ ಒಳಗಾದ ಹೊರ ಜಿಲ್ಲೆಗಳ 100 ಕ್ಕೂ ಅಧಿಕ ಕಾರ್ವಿುಕರಿಗೆ ಜಿಲ್ಲಾಡಳಿತದಿಂದ ಹಾಸ್ಟೆಲ್ಗಳಲ್ಲಿ ಆಶ್ರಯ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಕುಮಟಾದಲ್ಲಿ 38, ಹೊನ್ನಾವರದಲ್ಲಿ 67 ಕಾರ್ವಿುಕರಿಗೆ, ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್ಗಳಲ್ಲಿ ಅಂಕೋಲಾದಲ್ಲಿ 4, ಕಾರವಾರದಲ್ಲಿ 22,ಹಳಿಯಾಳದಲ್ಲಿ 25 ಜನರಿಗೆ ಆಶ್ರಯ ನೀಡಲಾಗಿದೆ. ಅಲ್ಲದೆ, ವಿವಿಧೆಡೆ ಆಶ್ರಯ ಪಡೆದ ಅಂಕೋಲಾದ 24, ಕುಮಟಾದ 17 ಹಾಗೂ ಕಾರವಾರದ 4 ಜನರಿಗೆ 11 ಅಂಗನವಾಡಿಗಳಿಂದ ಆಹಾರ ತಯಾರಿಸಿ ಪ್ರತಿ ದಿನ ರವಾನೆ ಮಾಡಲಾಗುತ್ತಿದೆ.
ರಾಸಾಯನಿಕ ಸಿಂಪಡಣೆ: ಭಟ್ಕಳದಲ್ಲಿ ವಿದೇಶದಿಂದ ಬಂದವರು ಹಾಗೂ ಸೋಂಕಿತರ ಮನೆಗಳಿಗೆ ಪುರಸಭೆಯ ನೌಕರರ ತಂಡ ರಾಸಾಯನಿಕ ಸಿಂಪಡಣೆ ಮಾಡುತ್ತಿದೆ. ಕರೊನಾ ವೈರಸ್ ತಡೆಯಬಲ್ಲ ಸೋಡಿಯಂ ಹೈಪೊಕ್ಲೋರೈಡ್ ರಾಸಾಯನಿಕವನ್ನು ನಿತ್ಯ ಸಿಂಪಡಣೆ ಮಾಡಲಾಗುತ್ತಿದೆ. ಜಿಲ್ಲೆಯ ಇತರ ನಗರ ಪ್ರದೇಶಗಳಲ್ಲೂ ಇದನ್ನು ಅನುಸರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಆರೋಗ್ಯ ಸಿಬ್ಬಂದಿ ಅವಧಿ ಮುಂದುವರಿಕೆ: ಕರೊನಾ ಸಂದರ್ಭದಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಿಭಾಗಗಳ ಗುತ್ತಿಗೆ ನೌಕರರ ಸೇವೆಯನ್ನು ಒಂದುವರ್ಷದವರೆಗೆ ಮುಂದುವರಿಸಿ ಡಿಎಚ್ಒ ಆದೇಶಿಸಿದ್ದಾರೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಸಿಬ್ಬಂದಿ, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕಾರ್ಯವನ್ನು ಮೌಲ್ಯಮಾಪನ ಮಾಡಿ ತೃಪ್ತಿಕರವಾಗಿದ್ದಲ್ಲಿ ಅವರನ್ನು ಮುಂದಿನ ವರ್ಷದವರೆಗೆ ಮುಂದುವರಿಸಿ ಡಿಎಚ್ಒ ಆದೇಶಿಸಿದ್ದಾರೆ. ನವಜಾತ ಶಿಶುಗಳ ಆರೈಕೆ, ಔಷಧ ಸರಬರಾಜು, ಆಂಬುಲೆನ್ಸ್ ಸೇವೆ, ಸಂಚಾರಿ ವೈದ್ಯಕೀಯ ಘಟಕ, ಪ್ರಧಾನಮಂತ್ರಿ ಡಯಾಲಿಸಿಸ್ ಕಾರ್ಯಕ್ರಮ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಜನನಿ ಸುರಕ್ಷಾ ಯೋಜನಾ, ರಾಷ್ಟ್ರೀ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಮುಂತಾದ ಎಲ್ಲ ವಿಭಾಗಗಳ ಸಿಬ್ಬಂದಿಯ ಸೇವೆಯನ್ನು 2021ರ ಮಾಚ್ 31 ರವರೆಗೆ ಮುಂದುವರಿಸಲಾಗಿದೆ.
ಜಿಲ್ಲೆಗೆ 44 ಲಕ್ಷ ರೂಪಾಯಿ ನೆರವು: ಡಿಸಿ ಡಾ. ಹರೀಶ ಕುಮಾರ್ ಕೆ. ಅವರ ವಿನಂತಿಯಂತೆ ಇನ್ಪೋಸಿಸ್ ಫೌಂಡೇಷನ್ ಜಿಲ್ಲೆಗೆ 44 ಲಕ್ಷ ರೂ.ನೆರವು ನೀಡಿದೆ. 25 ಸಾವಿರ ತ್ರಿಪಲ್ ಲೇಯರ್ ಮಾಸ್ಕ್, 10 ಸಾವಿರ ಹ್ಯಾಂಡ್ ಗ್ಲೌಸ್, 3 ಸಾವಿರ ಎನ್ 95 ಮಾಸ್ಕ್, 2 ಸಾವಿರ ಹ್ಯಾಂಡ್ ಸೆನಿಟೈಸರ್ಗಳನ್ನು ಸುಧಾ ಮೂರ್ತಿ ಅವರು ಕಳಿಸಿದ್ದಾರೆ ಎಂದು ಎಡಿಸಿ ನಾಗರಾಜ ಸಿಂಗ್ರೇರ್ ಮಾಹಿತಿ ನೀಡಿದ್ದಾರೆ.
ಕೊಂಕಣ ರೈಲ್ವೆಯಿಂದ ನೆರವು: ಕೊಂಕಣ ರೈಲ್ವೆ ನಿಗಮದಿಂದ ಪಿಎಂ ಕೇರ್ ನಿಧಿಗೆ 1.85 ಕೋ.ರೂ. ನೆರವು ನೀಡಿದೆ. ನಿಗಮದ (ಸಿಎಸ್ಆರ್) ನಿಧಿಯಿಂದ 1.06 ಕೋ.ರೂ. ಹಾಗೂ ನಿಗಮದ ಉದ್ಯೋಗಿಗಳ ವೇತನದಿಂದ 79.50 ಲಕ್ಷ ರೂ. ನೀಡಲಾಗಿದೆ ಎಂದು ನಿಗಮದ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಕೊಂಕಣ ರೈಲ್ವೆ ತುರ್ತು ಸಾಮಗ್ರಿ ಸಾಗಿಸಲು ಗೂಡ್ಸ್ ರೈಲು ಓಡಿಸಲಿದೆ. ಅಗತ್ಯ ಸೇವೆಗಳು ಬೇಕಿದ್ದಲ್ಲಿ ಹಿರಿಯ ವಾಣಿಜ್ಯ ಪ್ರಬಂಧಕರನ್ನು ಮೊ. ಸಂ. 9004470394 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.