

ವಿಜಯವಾಣಿ ಸುದ್ದಿಜಾಲ ಕಾರವಾರ
ಅಕ್ಟೋಬರ್ 28 ಹಾಗೂ 29 ರಂದು ಹೊನ್ನಾವರದ ಕಾಸರಕೋಡಿನ ಇಕೋ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನು ಪ್ರವಾಸೋದ್ಯಮ ಹಾಗೂ ಯುವ ಸಬಲೀಕರಣ ಇಲಾಖೆಯಿಂದ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ವಿವಿಧ ರಾಜ್ಯಗಳ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಮೊದಲ ಬಹುಮಾನ ಪಡೆದ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಇದನ್ನು ವಾರ್ಷಿಕ ಕಾರ್ಯಕ್ರಮವಾಗಿ ಸೇರಿಸಿಕೊಳ್ಳಲಾಗುವುದು ಎಂದರು.
ಕೋಟಿ ಕಂಠ ಗಾಯನ:
ಅ.28 ರಂದು ಬೆಳಗ್ಗೆ 11 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಏಕ ಕಾಲದಲ್ಲಿ ಆಯೋಜಿಸಲಾಗಿದೆ. ಕಾರವಾರದ ಸದಾಶಿವಗಡ ಕೋಟೆಯಲ್ಲಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಜನರಿಂದ ಏಕ ಕಾಲದಲ್ಲಿ ನಾಡಗೀತೆ ಸೇರಿ 6 ಹಾಡುಗಳನ್ನು ಹಾಡುವರು. ಇದುವರೆಗೆ ಜಿಲ್ಲಾದ್ಯಂತ 5600 ಜನರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲ ಶಾಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಬೇಕು. ಜೊಯಿಡಾ ದಾಂಡೇಲಿ ಸೇರಿ ಉಳಿದ ತಾಲೂಕುಗಳಲ್ಲಿ ತಲಾ 40 ಸಾವಿರ ಜನ ಏಕ ಕಾಲದಲ್ಲಿ ಈ ಗೀತೆಗಳನ್ನು ಹಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಹಲವು ಸಭೆಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ವಿವರಿಸಿದರು.