ಮದ್ದೂರು: ತಾಲೂಕಿನ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗಕ್ಕೆ ನೀರು ತಲುಪುತ್ತಿಲ್ಲ. ಹೀಗಾಗಿ ನಾಲೆಗಳ ಆಧುನೀಕರಣ, ಮಂಡ್ಯದಲ್ಲಿ ರಿಂಗ್ ರಸ್ತೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಜಿಲ್ಲೆಯ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಡುವಂತೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನಲ್ಲಿ ಈ ಹಿಂದೆ ಸರ್ಕಾರದ ವತಿಯಿಂದ ಮಾಡಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಸಂಬಂಧ ಉನ್ನತ ತನಿಖೆ ನಡೆಸಲಾಗುವುದು. ಒಂದು ವೇಳೆ ಕಳೆಪೆ ಕಾಮಗಾರಿ ಎಂದು ತಿಳಿದು ಬಂದರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಪುರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಪೇಟೆ ಬೀದಿ ವಿಸ್ತರಣೆಗೆ ಕ್ರಮ: ಪಟ್ಟಣದ ಪೇಟೆಬೀದಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಶೀಘ್ರವಾಗಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ರಸ್ತೆ ವಿಸ್ತರಣೆ ಮಾಡಲು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ ಇದ್ದರು.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಾಳೆ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಅನ್ನಭಾಗ್ಯಕ್ಕೆ ಅಕ್ಕಿ ನೀಡಲು ತಾರತಮ್ಯ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜೂ.20ರಂದು ಮಂಡ್ಯದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ ಎಂಬ ಒಂದೇ ಉದ್ದೇಶದಿಂದ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಕ್ರೆಡಿಟ್ ಸಿಗುತ್ತೆ ಎಂದು ರಾಜ್ಯ ಸರ್ಕಾರದ ಜನರಿಗೆ ಉಚಿತವಾಗಿ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಮಾರಾಟವನ್ನು ನಿಲ್ಲಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮುಂದಾಗಿದೆ. ಬಿಜೆಪಿ ದುರಾಡಳಿತಕ್ಕೆ ನಾವು ಉತ್ತರ ನೀಡಲೇ ಬೇಕಿದೆ. ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ದ್ರೋಹ ಮಾಡಿ ಕಾಂಗ್ರೆಸ್ ಆಡಳಿತದ ಮೇಲೆ ದಾಳಿ ನಡೆಸುತ್ತಿದೆ. ಎಷ್ಟೇ ಕಷ್ಟವಾದರೂ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.
ಹೀಗಾಗಿ ಜೂ.20ರಂದು ಬೆಳಗ್ಗೆ 11ಗಂಟೆಗೆ ಮಂಡ್ಯ ನಗರದಲ್ಲಿ ಆಯೋಜಿಸಿರುವ ಪ್ರತಿಭಟನೆಗೆ ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದೆ. ಈ ಬಗ್ಗೆ ಪ್ರತಿಪಕ್ಷಗಳು ಮೂಡಿಸುತ್ತಿರುವ ಗೊಂದಲಗಳಿಗೆ ಜನರು ಕಿವಿಗೊಡಬಾರದು. ಭಾಗ್ಯಜ್ಯೋತಿ ಯೋಜನೆಗೆ ಜನರು ಅರ್ಜಿಯನ್ನು ಸಂಬಂಧಿಸಿದ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.