

ಬಾಗಲಕೋಟೆ: ೨೦೨೪ರ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.೭೭.೯೨ ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ೧೩ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೧೪೯೫೪ ಬಾಲಕರು ಮತ್ತು ೧೫೪೯೨ ಬಾಲಕಿಯರು ಸೇರಿ ಒಟ್ಟು ೩೦೪೪೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೧೧೦೪೪ ಬಾಲಕರು, ೧೩೪೧೫ ಬಾಲಕಿಯರು ಸೇರಿ ಒಟ್ಟು ೨೪೪೫೯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಬಾರಿಯು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಬಾಲಕರು ಶೇ.೭೩.೮೫ ರಷ್ಟು ತೇರ್ಗಡೆ ಹೊಂದಿದರೆ, ಬಾಲಕಿಯರು ಶೇ.೮೬.೫೯ ರಷ್ಟು ತೇರ್ಗಡೆ ಹೊಂದಿರುತ್ತಾರೆ. ಕಳೆದ ೨೦೨೨-೨೩ನೇ ಸಾಲಿನಲ್ಲಿ ಶೇ.೮೪.೨೧ ಫಲಿತಾಂಶ ಪಡೆಯುವ ಮೂಲಕ ೨೭ನೇ ಸ್ಥಾನ ಪಡೆದುಕೊಂಡರೆ, ೨೦೨೩-೨೪ನೇ ಸಾಲಿನಲ್ಲಿ ಶೇ.೭೭.೯೨ ರಷ್ಟು ಫಲಿತಾಂಶ ಪಡೆಯುವ ಮೂಲಕ ೧೩ನೇ ಸ್ಥಾನ ಪಡೆದುಕೊಂಡಿದೆ. ಶೇಖಡಾವಾರು ಫಲಿತಾಂಶದಲ್ಲಿ ಕಳೆದ ಸಾಲಿನಿಂದ ಈ ಸಾಲಿಗೆ ಹೋಲಿಸಿದರೆ ಕಡಿಮೆ ಇದ್ದರೂ ಸ್ಥಾನದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ.
೬೨೫ಕ್ಕೆ ೬೨೫ ಅಂಕ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಬಸಪ್ಪ ಕೊಣ್ಣೂರ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅಂಕಿತಾ ರಾಜ್ಯಕ್ಕೂ ಜಿಲ್ಲೆಗೂ ಪ್ರಥಮ ಸ್ಥಾನ ಪಡೆದುಕೊಂಡರೆ, ೬೨೫ಕ್ಕೆ ೬೨೨ ಅಂಕ ಪಡೆದ ಮುಧೋಳನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶೃತಿ ಹಂಚಾಟೆ, ಗುಳೇದಗುಡ್ಡ ಸರಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಮಿನಾಜ ಕುರುಡಗಿ ಜಿಲ್ಲೆಗೆ ದ್ವಿತೀಯ ಸ್ಥಾನ, ಬಾಗಲಕೋಟೆ ಎಸ್.ಸಿ, ಎಸ್‌ಟಿ ಪ್ರತಿಭಾನ್ವಿತ ಶಾಲೆಯ ವಿದ್ಯಾರ್ಥಿ ದೀಪಾ ಕೊಕಟನೂರ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾದಾಮಿ ತಾಲೂಕಿನಲ್ಲಿ ೫೨೩೭ ಪೈಕಿ ೪೧೯೪ (ಶೇ.೮೦.೦೮) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ ೪೫೫೬ ಪೈಕಿ ೩೬೨೦ (ಶೇ.೭೯.೪೬), ಬೀಳಗಿ ತಾಲೂಕಿನಲ್ಲಿ ೨೭೮೩ ಪೈಕಿ ೧೮೯೩ (ಶೇ.೬೮.೦೨), ಹುನಗುಂದ ತಾಲೂಕಿನಲ್ಲಿ ೫೦೮೫ ಪೈಕಿ ೪೧೦೮ (ಶೇ.೮೦.೭೯), ಜಮಖಂಡಿ ತಾಲೂಕಿನಲ್ಲಿ ೭೭೨೫ ಪೈಕಿ ೬೪೪೦ (ಶೇ.೮೩.೩೭) ಹಾಗೂ ಮುಧೋಳ ತಾಲೂಕಿನಲ್ಲಿ ೫೦೬೦ ಪೈಕಿ ೪೨೦೪ (ಶೇ.೮೩.೦೮) ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಎಂದು ಬಿ.ಕೆ.ನಂದನೂರ ತಿಳಿಸಿದ್ದಾರೆ.