ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ

28SIRSI1- sureschandra hegde
Published on

ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವ ಸಲುವಾಗಿ ಬಜೆಟ್​ನಲ್ಲಿ ವಿಶೇಷ ಅನುದಾನ ಕಾಯ್ದಿರಿಸುವಂತೆ ವಿಧಾನ ಸಭಾಧ್ಯಕ್ಷರ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಜಿಲ್ಲೆಯು ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳನ್ನೊಳಗೊಂಡ ಒಂದು ವಿಶಿಷ್ಟವಾದ ಜಿಲ್ಲೆಯಾಗಿದೆ. ಈ ಜಿಲ್ಲೆಯ ಶೇ.75ರಷ್ಟು ಜನರು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಜೊತೆಗೆ ಉಪಕಸುಬಾದ ಹೈನುಗಾರಿಕೆಗೆ ಅತ್ಯುತ್ತಮವಾದ ಅವಕಾಶಗಳನ್ನೊಳಗೊಂಡಿದ್ದು, ಪ್ರತಿ ವರ್ಷ ಹಾಲಿನ ಉತ್ಪಾದನೆಯಲ್ಲಿ ಹಾಗೂ ಮಾರಾಟದಲ್ಲಿ ಶೇ.18ರಷ್ಟು ಏರಿಕೆ ಕಾಣುತ್ತಿದೆ. ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 250 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಂದಾಜಿನ ಪ್ರಕಾರ 2,75,235ಕ್ಕೂ ಹೆಚ್ಚು ರಾಸುಗಳು ಹಾಗೂ 73,300ಕ್ಕೂ ಹೆಚ್ಚು ಎಮ್ಮೆಗಳಿವೆ. ಆದರೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕೆಎಂಎಫ್ ಸಂಘಗಳಿಲ್ಲದ ಕಾರಣ ಹಾಲನ್ನು ಖಾಸಗಿ ಡೈರಿ ಖರೀದಿಸುತ್ತಿರುವುದರಿಂದ ರೈತರಿಗೆ ಸರ್ಕಾರ ನೀಡುವ 5 ರೂ. ಪೋ›ತ್ಸಾಹಧನ ಹಾಗೂ ಒಕ್ಕೂಟದ ಹಲವು ಸೌಲಭ್ಯಗಳು ತಲುಪುತ್ತಿಲ್ಲ. ಜತೆ ಗ್ರಾಹಕರಿಕೆ ಗುಣಮಟ್ಟದ ಹಾಲು ಸಿಗುತ್ತಿಲ್ಲ. ಒಂದು ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಒಂದು ಒಕ್ಕೂಟ ಸ್ಥಾಪನೆಯಾದಲ್ಲಿ ರಾಸುಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಸಂಘಗಳ ಸಂಖ್ಯೆಯು ಹೆಚ್ಚಾಗುತ್ತದೆ. ಹೈನುಗಾರ ರೈತರಿಗೂ, ಗ್ರಾಹಕರಿಗೂ ನ್ಯಾಯ ಒದಗಿಸಿದಂತಾಗುತ್ತದೆ. ಜಿಲ್ಲೆಯಲ್ಲಿ ಉದ್ಯೋಗವಕಾಶ ಸೃಷ್ಟಿಯಾಗುವುದರ ಜೊತೆ ಕೃಷಿಯಿಂದ ವಿಮುಖರಾಗುತ್ತಿರುವ ಯುವಕರಿಗೆ ಹೈನುಗಾರಿಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಬಜೆಟ್​ನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಅನುದಾನ ನೀಡುವಂತೆ ಒತ್ತಾಯಿಸಲಾಗಿದೆ ಎಂದರು. ಈ ವೇಳೆ ಒಕ್ಕೂಟದ ನಿರ್ದೇಶಕರಾದ ಪಿ.ವಿ.ನಾಯ್ಕ, ಶಂಕರ ಹೆಗಡೆ ಇದ್ದರು.

ಉತ್ತಮ ಸೇವೆ ನೀಡಲು ಸಹಕಾರಿ: ಜಿಲ್ಲೆಯಲ್ಲಿ ಒಟ್ಟು 1200ಕ್ಕೂ ಹೆಚ್ಚು ಗ್ರಾಮಗಳಿದ್ದು, ಕೆಲವು ತಾಂತ್ರಿಕ ಕಾರಣ ಹಾಗೂ ಆಡಳಿತಾತ್ಮಕ ತೊದರೆಯಿಂದಾಗಿ ಕೇವಲ ಶೇ.55ರಷ್ಟು ಗ್ರಾಮಗಳಲ್ಲಿ ಮಾತ್ರ ಸಂಘಗಳಿದ್ದು ಜಿಲ್ಲೆಯಲ್ಲಿಯೇ ಒಂದು ಒಕ್ಕೂಟವಾದರೆ ಪ್ರತಿ ಗ್ರಾಮದಲ್ಲಿಯೂ ಸಂಘಗಳನ್ನು ತೆರೆದು ಹಾಲು ಉತ್ಪಾದಕರಿಕೆ ಹಾಗೂ ಗ್ರಾಹಕರಿಗೆ ಸೇವೆ ನೀಡಲು ಸಾಧ್ಯ. ಜಿಲ್ಲೆಯು ಹಲವು ಪ್ರವಾಸಿ ತಾಣಗಳನ್ನೊಳಗೊಂಡಿದ್ದು, ಕರಾವಳಿ ಪ್ರದೇಶ, ಕೈಗಾ ಅಣು ವಿದ್ಯುತ್ ಸ್ಥಾವರ, ಸೀಬರ್ಡ್ ನೌಕಾ ನೆಲೆ ಮುಂತಾದ ಕಾರಣಗಳಿಂದ ದೊಡ್ಡ ಪ್ರಮಾಣದ ಹಾಲಿನ ಮಾರುಕಟ್ಟೆ ಇದೆ. ಪ್ರತಿ ದಿನ ಸುಮಾರು 2 ಲಕ್ಷ ಲೀಟರ್ ಹಾಲಿನ ಉತ್ಪಾದನೆಯ ಸಾಮರ್ಥ್ಯ ಜಿಲ್ಲೆಗಿದ್ದು, ಅಷ್ಟೇ ಪ್ರಮಾಣದ ಮಾರುಕಟ್ಟೆ ಕೂಡ ಇದೆ. ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಹಾಲು ಶೇಖರಣೆಯ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಸತೀಶ್ಚಂದ್ರ ಹೆಗಡೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net