

ಸುಭಾಸ ಧೂಪದಹೊಂಡ ಕಾರವಾರ
ನಗರ ಪ್ರದೇಶಗಳಲ್ಲಿ ಸರ್ಕಾರ ನಂಬಿ ಮನೆ ಕಟ್ಟಿಕೊಂಡವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ 600ಕ್ಕೂ ಅಧಿಕ ವಸತಿ ಯೋಜನೆಯ ಫಲಾನುಭವಿಗಳಿಗೆ ಒಟ್ಟು 10.11 ಕೋಟಿ ರೂ. ಸಹಾಯಧನ ಬಿಡುಗಡೆಗೆ ಬಾಕಿ ಇದೆ.
ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ 2015-16, 2016-17 ಹಾಗೂ 2017-18ನೇ ಸಾಲಿನ ಅನುದಾನವು ಬಿಡುಗಡೆಯಾಗದೆ ಬಾಕಿ ಉಳಿದುಕೊಂಡಿದೆ. ಸರ್ಕಾರದಿಂದ ಸಹಾಯಧನ ಸಿಗಲಿದೆ ಎಂಬ ಭರವಸೆಯಲ್ಲಿ ಪ್ರಾರಂಭಿಸಿದ ಹಲವರ ಮನೆಗಳು ಅರ್ಧಕ್ಕೇ ನಿಂತಿವೆ. ಕೆಲವರು ಮನೆ ಕಟ್ಟಲು ಪಡೆದ ಸಾಲಕ್ಕಾಗಿ ಅಡವಿಟ್ಟ ಜಾಗವೇ ಈಗ ಹರಾಜಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಬಂಗಾರ ಅಡವಿಟ್ಟವರು ಬಡ್ಡಿ ತುಂಬಲಾಗದೆ, ಆಭರಣಗಳು ಮಾರಾಟವಾಗಿ ಹೋಗಿವೆ. ಜನರು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಅಲೆದು ಸೋತಿದ್ದಾರೆ.
ಕೇಂದ್ರದಿಂದಲೇ ಅಧಿಕ ಬಾಕಿ
ರಾಜೀವ ಗಾಂಧಿ ವಸತಿ ನಿಗಮದ ಮೂಲಕ ರಾಜ್ಯದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ. ವಾಜಪೇಯಿ ವಸತಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ 1.20 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ 1.50 ಲಕ್ಷ ರೂ. ನೀಡಲಾಗುತ್ತದೆ. ಒಟ್ಟಾರೆ ಒಬ್ಬ ಫಲಾನುಭವಿಗೆ 2.70 ಲಕ್ಷ ರೂ. ಸಹಾಯಧನ ದೊರೆಯುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಎಸ್ಸಿ ಮತ್ತು ಎಸ್ಟಿ ಫಲಾನುಭವಿಗಳಿಗೆ ಮಾತ್ರ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ ಯೋಜನೆಯ 1.50 ಲಕ್ಷ ಸೇರಿ ಒಟ್ಟು 3.50 ಲಕ್ಷ ರೂ. ಸಹಾಯಧನ ದೊರೆಯುತ್ತದೆ. ನೆಲಗಟ್ಟು, ಲಿಂಟಲ್, ಛಾವಣಿ... ಹೀಗೆ ವಿವಿಧ ಹಂತದ ನಿರ್ಮಾಣ ಕಾಮಗಾರಿಯಾದಂತೆ ಫೋಟೋವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. 304 ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಪಾಲು ಒಟ್ಟು 1.62 ಕೋಟಿ ರೂ. ಬಾಕಿ ಇದೆ. 666 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಪಾಲು 8.49 ಕೋಟಿ ರೂ. ತಲುಪಿಲ್ಲ. ಒಟ್ಟಾರೆ ಜಿಲ್ಲೆಗೆ ನಗರ ವಸತಿ ಯೋಜನೆಯ 10.11 ಕೋಟಿ ರೂ. ಸಹಾಯಧನ ಬಿಡುಗಡೆಗೆ ಬಾಕಿ ಇದೆ.
ಹಣ ಬಿಡುಗಡೆ ಬಾಕಿ ಇರುವುದರಿಂದ ಉಂಟಾಗುತ್ತಿರುವ ಸಮಸ್ಯೆ ವಿವರಿಸಿ ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. | ಕೃಷ್ಣಮೂರ್ತಿ ಎಚ್.ಕೆ. ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ ಸರ್ಕಾರ ಹಣ ಕೊಡುತ್ತದೆ ಎಂದು ಮನೆ ಪ್ರಾರಂಭಿಸಿದೆವು. ಆದರೆ, ನಗರಸಭೆ ಕಚೇರಿಗೆ ತಿರುಗಿ ಸಾಕಾಯಿತು. ಇದುವರೆಗೂ ಖಾತೆಗೆ ಹಣ ಬಂದಿಲ್ಲ. ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರದಿಂದ ಹಣ ಬರಬೇಕು ಎಂಬ ಉತ್ತರ ಮಾತ್ರ ಬರುತ್ತದೆ. ಹಣ ಕೊಡದಿದ್ದರೆ ನಮಗೆ ಭರವಸೆ ಪತ್ರ ಕೊಟ್ಟಿದ್ದಾದರೂ ಯಾಕೆ?| ಚಂದನ ಮಹಾಲೆ ವಸತಿ ಯೋಜನೆಯ ಫಲಾನುಭವಿ