

ಹಾನಗಲ್ಲ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಅಡಕೆ ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳ ಹವಾಮಾನ ಆಧಾರಿತ ಬೆಳೆ ವಿಮೆ ಜಿಲ್ಲೆಗೆ 10.59 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಜಿಲ್ಲೆಯಲ್ಲಿ 5240 ರೈತರು ವಿಮಾ ಕಂತು ಪಾವತಿಸಿದ್ದಾರೆ. ಆದರೆ, ಅದರಲ್ಲಿ 3161 ರೈತರಿಗೆ ಮಾತ್ರ ಪರಿಹಾರ ಮಂಜೂರಾಗಿದೆ. ಇನ್ನುಳಿದ 2079 ರೈತರು ತಮ್ಮ ಜಮೀನುಗಳಿಗೆ ನೀಡಿರುವ ದಾಖಲೆಗಳು ತಾಂತ್ರಿಕವಾಗಿ ಹೊಂದಾಣಿಕೆ ಆಗದ್ದರಿಂದ ಬಾಕಿ ಉಳಿದಿವೆ. ಅಂಥ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಭೇಟಿ ಮಾಡಿ, ಅವರ ಮಾರ್ಗದರ್ಶನದಲ್ಲಿ ಮೊಬೈಲ್ ಆಪ್ ಮೂಲಕ ದೃಢೀಕರಿಸಿದ ನಂತರ ವಿಮಾ ಪರಿಹಾರ ಮಂಜೂರಾಗಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾನಗಲ್ಲ ತಾಲೂಕಿನ 1808 ಅಡಕೆ ಬೆಳೆಗಾರರು ಮತ್ತು 1708 ಮೆಣಸಿನಕಾಯಿ ಬೆಳೆಗಾರರಿಗೆ ಒಟ್ಟು 6.93 ಕೋಟಿ ರೂ.ಬೆಳೆ ಹಾನಿ ಪರಿಹಾರ ಮಂಜೂರಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪರಿಹಾರ ಹಾನಗಲ್ಲ ತಾಲೂಕಿನ ರೈತರಿಗೆ ಮಂಜೂರಾಗಿದೆ. ಹಸಿ ಮೆಣಸಿನಕಾಯಿ ಬೆಳೆದ 152 ರೈತರಿಗೆ 26.91 ಲಕ್ಷ ರೂ. ಪರಿಹಾರ ಮೊತ್ತ ಇದರಲ್ಲಿ ಸೇರಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿವಾರು ಹವಾಮಾನ ಆಧಾರಿತ ಅಂಕಿ-ಅಂಶಗಳ ಮೇಲೆ ಬೆಳೆ ವಿಮೆ ಪರಿಹಾರದ ಲೆಕ್ಕಾಚಾರ ಮಾಡಿ ವರದಿ ಸಲ್ಲಿಸಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಆಗಲಿದೆ ಎಂದು ತಿಳಿಸಿದರು.
ತಾಲೂಕುವಾರು ಬೆಳೆ ವಿಮೆ ಪರಿಹಾರ ವಿವರ: ಹಾನಗಲ್ಲ ತಾಲೂಕಿನ 1708 ರೈತರಿಗೆ 6.93 ಕೋಟಿ ರೂ., ಬ್ಯಾಡಗಿ ತಾಲೂಕಿನ 25 ರೈತರಿಗೆ 9.36 ಲಕ್ಷ ರೂ., ಹಿರೇಕೆರೂರಿನ 205 ರೈತರಿಗೆ 88.47 ಲಕ್ಷ ರೂ., ಶಿಗ್ಗಾಂವಿಯ 26 ರೈತರಿಗೆ 15.76 ಲಕ್ಷ ರೂ. ಪರಿಹಾರ ಸೇರಿ ಒಟ್ಟು 1964 ರೈತರಿಗೆ 8.73 ಕೋಟಿ ರೂ. ಬಿಡುಗಡೆಯಾಗಿದೆ. ಇದರೊಂದಿಗೆ ಹಸಿ ಮೆಣಸಿನಕಾಯಿ ಬೆಳೆದ ಹಾವೇರಿ ತಾಲೂಕಿನ 465 ರೈತರಿಗೆ 91.96 ಲಕ್ಷ ರೂ., ಸವಣೂರ ತಾಲೂಕಿನ 377 ರೈತರಿಗೆ 92.77 ಲಕ್ಷ ರೂ., ಹಾನಗಲ್ಲಿನ 152 ರೈತರಿಗೆ 26.91 ಲಕ್ಷ ರೂ., ಬ್ಯಾಡಗಿಯ 43 ರೈತರಿಗೆ 6.59 ಲಕ್ಷ ರೂ., ಹಿರೇಕೆರೂರಿನ 17 ರೈತರಿಗೆ 4.17 ಲಕ್ಷ ರೂ, ರಾಣೆಬೆನ್ನೂರಿನ 28 ರೈತರಿಗೆ 3.55 ಲಕ್ಷ ರೂ, ಶಿಗ್ಗಾಂವಿಯ 115 ರೈತರಿಗೆ 2.69 ಲಕ್ಷ ರೂ. ಸೇರಿ ಜಿಲ್ಲೆಯಲ್ಲಿ ಹಸಿ ಮೆಣಸಿನಕಾಯಿ ಬೆಳೆದ ಒಟ್ಟು 1197 ರೈತರಿಗೆ 2.52 ಕೋಟಿ ರೂ. ಮಂಜೂರಾಗಿದೆ. ಇದಲ್ಲದೆ ಕಳೆದ ವರ್ಷದ ಮಾವು ಬೆಳೆ ವಿಮೆ ಪರಿಹಾರವೂ ಡಿಸೆಂಬರ್ನಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದರು.
ತೋಟಗಾರಿಕೆ ಇಲಾಖೆಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಾಗಿ ಇದುವರೆಗೆ 2.10 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 1500 ಜನ ರೈತರು ಅಡಕೆ ಸಸಿ ಹಚ್ಚುವ ಕಾಮಗಾರಿ ಕೈಗೊಂಡಿದ್ದರು. ಇದಕ್ಕಾಗಿ 5.51 ಕೋಟಿ ರೂ. ಬಿಡುಗಡೆಯಾಗಿದೆ. 2020-21ರಲ್ಲಿ ಜಿಲ್ಲೆಯಲ್ಲಿ 9154 ರೈತರು ಶುಂಠಿ ಮತ್ತು ಅಡಕೆಯ ತೋಟಗಾರಿಕೆಗೆ ನೋಂದಣಿಯಾಗಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ 5266 ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ಸಂಸದರು ತಿಳಿಸಿದರು.