

ಹಾವೇರಿ: ಮಾರಣಾಂತಿಕವಾಗಿರುವ ಕರೊನಾ ವೈರಸ್ ಸೋಂಕುವುಳ್ಳವರ ಪ್ರತ್ಯೇಕ ಚಿಕಿತ್ಸೆಗಾಗಿ ಮುಂಜಾಗೃತಾ ಕ್ರಮವಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಪ್ರತ್ಯೇಕ ಘಟಕ ತೆರೆಯಲಾಗಿದೆ.
ಜಿಲ್ಲಾ ಆಸ್ಪತ್ರೆಯ ಒಂದು ವಾರ್ಡ್ನಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿದ್ದು, ಓರ್ವ ಸಿಬ್ಬಂದಿ ನಿಯೋಜಿಸಲಾಗಿದೆ. ಘಟಕದಲ್ಲಿ ಸುರಕ್ಷಾ ಕ್ರಮಗಳಿಗೆ ಬೇಕಾದ ಅಗತ್ಯ ಔಷಧ, ವೈದ್ಯಕೀಯ ವಸ್ತುಗಳನ್ನು ಇಡಲಾಗಿದೆ. ಕರೊನಾ ವೈರಸ್ ಬಗ್ಗೆ ಭಯಬೇಡ. ಆದರೆ, ಎಚ್ಚರವಿರಲಿ. ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಹಾಗೂ ಬೇಧಿ ಲಕ್ಷಣ ಕಂಡು ಬಂದರೆ ಕೂಡಲೇ ವೈದರನ್ನು ಸಂರ್ಪಸಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಬೇಕು. ಕೈಯನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಬೇಕು. ಸೋಂಕಿತ ಪ್ರಾಣಿ, ವ್ಯಕ್ತಿಗಳ ನೇರ ಸಂಪರ್ಕ ಮಾಡಬಾರದು ಹಾಗೂ ಹಸಿಮಾಂಸ ಸೇವಿಸಬಾರದು ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ಸಾಮಾನ್ಯ ಜ್ವರದ ರೀತಿಯಲ್ಲಿಯೇ ಕರೊನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್ ಹರಡುತ್ತವೆ. ಈ ಸೋಂಕು ಲಕ್ಷಣ ಕಂಡುಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಲ್ಲಿ ಪರೀಕ್ಷೆಗೊಳಪಡಿಸಿ ಸೋಂಕು ದೃಢಪಡಿಸಲಾಗುತ್ತದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ನಾಗರಾಜ ನಾಯಕ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ. ಆದರೂ, ಜಿಲ್ಲಾಸ್ಪತ್ರೆಯಲ್ಲಿ ಮುಂಜಾಗೃತಾ ಕ್ರಮವಾಗಿ ವಿಶೇಷ ಘಟಕ ತೆರೆಯಲಾಗಿದೆ. ಅಲ್ಲದೆ, ಆಸ್ಪತ್ರೆಯಲ್ಲಿರುವ ಎಲ್ಲ ವೈದ್ಯರು, ನರ್ಸ್ಗಳು, ಡಿ ಗ್ರುಪ್ ಸಿಬ್ಬಂದಿಗೂ ಕರೊನಾ ವೈರಸ್ನ ಕುರಿತು ವೀಡಿಯೋ ಮೂಲಕ ಮಾಹಿತಿ ನೀಡಲಾಗಿದೆ. ಯಾವುದೇ ರೋಗಿಗೆ ಅಂತಹ ಲಕ್ಷಣಗಳು ಕಂಡುಬಂದರೆ ತುರ್ತು ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. | ಡಾ. ನಾಗರಾಜ ನಾಯಕ, ಜಿಲ್ಲಾಸ್ಪತ್ರೆ ಸರ್ಜನ್