

ಬೆಳಗಾವಿ: ಇನ್ಫೋಸಿಸ್ ಫೌಂಡೇಷನ್ ಹಾಗೂ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮಗಳ ವತಿಯಿಂದ ಗುರುವಾರ ವಿಪತ್ತು ಸಂದರ್ಭದಲ್ಲಿ ಬಳಸಬಹುದಾದ ವಿಪತ್ತು ನಿರ್ವಹಣಾ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಪ್ರವಾಹಕ್ಕೆ ತುತ್ತಾದ ಜಿಲ್ಲೆಯ ಗೋಕಾಕ, ಅಡಿಬಟ್ಟಿ, ಚಿಕದೊಳ್ಳಿ, ಮೆಳವಂಕಿ, ಹುಣಶ್ಯಾಳ, ಮಸಗುಪ್ಪಿ ಮುಂತಾದ ಪ್ರದೇಶಗಳಲ್ಲಿ ಅಂದಾಜು 4,000 ಕುಟುಂಬಗಳಿಗೆ ಇನ್ಫೋಸಿಸ್ ಫೌಂಡೇಷನ್, ಶ್ರೀರಾಮಕೃಷ್ಣ ಸೇವಾಶ್ರಮ ವತಿಯಿಂದ ಪರಿಹಾರ ಸಾಮಗ್ರಿ ವಿತರಿಸಲಾಗಿದೆ.
ವಿಪತ್ತು ಸಂದರ್ಭದಲ್ಲಿ ಅವಶ್ಯಕವಾದ ಅತ್ಯಾಧುನಿಕ ಯಂತ್ರೋಪಕರಣಗಳು, ರೈನ್‌ಕೋಟ್, ಗಂಬೂಟ್ಸ್, ಛತ್ರಿ, ಆಧುನಿಕ ತಂತ್ರಜ್ಞಾನವುಳ್ಳ ಗರಗಸಗಳು, ಮರದ ರೆಂಬೆ ಕತ್ತರಿಸುವ ಯಂತ್ರೋಪಕರಣಗಳು ಸೇರಿ ವಿವಿಧ ರೀತಿ ಸಲಕರಣೆಗಳ 52 ಬಾಕ್ಸ್‌ಗಳನ್ನು ಯೋಜನೆಯ ಮುಖ್ಯ ಕಾರ್ಯ ನಿರ್ವಾಹಕ ಸ್ವಾಮಿ ಜಪಾನಂದಜಿ ಮಹಾರಾಜ್ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಹಸ್ತಾಂತರಿಸಿದರು.
ಇನ್ಫೋಸಿಸ್ ಪ್ರತಿನಿಧಿ ಅಂಕುರ್ ಗುಪ್ತಾ, ಸಚಿನ್ ಮುಂಗರವಾಡಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಕೆ.ಕೆ.ಮಲ್ಲಿಕಾರ್ಜುನ, ಶ್ರೀಶೈಲ ಪರಗಿ, ಪ್ರಶಾಂತ ಪಾಟೀಲ, ಎಂ.ಎಂ. ನದಾಫ್, ಮಂಜುನಾಥ ಇತರರಿದ್ದರು.