ಜಿಲ್ಲಾ ಸರ್ಜನ್ ವಿರುದ್ಧ ಕ್ರಮಕ್ಕೆ ಆಗ್ರಹ

5KWR1
Published on

ಕಾರವಾರ: ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಅವರ ಮೇಲೆ ಕ್ರಮ ವಹಿಸುವಂತೆ ಆಗ್ರಹಿಸಿ ಮೀನುಗಾರ ಮುಖಂಡರು ಶನಿವಾರ ಮೀನು ಮಾರಾಟ ಬಂದ್ ಮಾಡಿ, ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮಾಲಾದೇವಿ ಮೈದಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಡಾ.ಕುಡ್ತಲಕರ್ ವಿರುದ್ಧ ಘೊಷಣೆಗಳನ್ನು ಕೂಗಿದರು. ಮೃತಳ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಅವರಿಗೆ ಮನವಿ ಸಲ್ಲಿಸಿದರು.

ಆಗಸ್ಟ್ 31 ರಂದು ಕ್ರಿಮ್್ಸ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸವೋದಯನಗರ ಮೀನುಗಾರ ಮಹಿಳೆ ಗೀತಾ ಬಾನಾವಳಿ ಎಂಬ ಬಾಣಂತಿ ಆರೋಗ್ಯವಾಗಿದ್ದರು. ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಸೆ. 3ರಂದು ಅವರನ್ನು ಕರೆದೊಯ್ಯಲಾಗಿತ್ತು. ಆಗ ಗೀತಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯೇ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಈ ಸಂಬಂಧ ಶಹರ ಠಾಣೆಯಲ್ಲಿ ಡಾ.ಕುಡ್ತಲಕರ್ ವಿರುದ್ಧ ದೂರು ದಾಖಲಾಗಿದ್ದು, ವೈದ್ಯರನ್ನು ಬಂಧಿಸಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಮೃತಳ ಪತಿ ಶಿವನಾಥ ಚಿಕ್ಕ ಮಗುವಿನೊಂದಿಗೆ ಆಗಮಿಸಿ ತಮ್ಮ ಗೋಳು ತೋಡಿಕೊಂಡರು.

ಮುಖಂಡರಾದ ರಾಜು ತಾಂಡೇಲ, ಜಿ.ಪಿ. ತಾರಿಕರ್, ರಾಘು ನಾಯ್ಕ, ನಗರಸಭೆ ಸದಸ್ಯರಾದ ಪ್ರೇಮಾನಂದ ಗುನಗಾ, ಸುವಿಧಾ ಉಳ್ವೇಕರ್, ರಂಜಿತಾ ಮಾಳ್ಸೇಕರ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

ತನಿಖಾ ತಂಡ ರಚನೆ: ಕ್ರಿಮ್್ಸ ಆಸ್ಪತ್ರೆಯಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ವೇಳೆ ಬಾಣಂತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ತನಿಖಾ ತಂಡ ರಚನೆ ಮಾಡಿದ್ದಾರೆ. ಶನಿವಾರ ಮೀನುಗಾರ ಮುಖಂಡರಿಂದ ನಡೆದ ಪ್ರತಿಭಟನೆಯಲ್ಲಿ ಡಾ.ಶಿವಾನಂದ ಕುಡ್ತಲಕರ್ ಅವರ ಬಗ್ಗೆ ದೂರಲಾದ ಅಂಶಗಳ ಬಗ್ಗೆ ಆದೇಶ ಪತ್ರದಲ್ಲಿ ಡಿಸಿ ಹರೀಶ ಕುಮಾರ ಪ್ರಸ್ತಾಪಿಸಿದ್ದಾರೆ. ಜಿಪಂ ಸಿಇಒ ಎಂ.ರೋಶನ್ ಅವರ ಅಧ್ಯಕ್ಷತೆಯಲ್ಲಿ ಡಿಎಚ್​ಒ, ಒಬ್ಬ ಹೃದ್ರೋಗ ತಜ್ಞರು, ಖಾಸಗಿ ಅರವಳಿಕೆ ತಜ್ಞರು, ಹಾಗೂ ಖಾಸಗಿ ಸ್ತ್ರೀ ರೋಗ ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ. 10 ದಿನದಲ್ಲಿ ವರದಿ ನೀಡಬೇಕು ಎಂದು ಡಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net