ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಗಿರಿಜನರ ನಿರ್ಲಕ್ಷ್ಯ

Published on

ಗೋಣಿಕೊಪ್ಪಲು: ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳು ಗಿರಿಜನರನ್ನು ನಿರ್ಲಕ್ಷೃ ಮಾಡುತ್ತಿದ್ದು ಜಿಲ್ಲೆಗೆ ಆಗಮಿಸುವ ನಿಗಮ-ಮಂಡಳಿಗಳ ಅಧ್ಯಕ್ಷರ ಆಗಮನ ಸಂದರ್ಭ ಗಿರಿಜನ ಮುಖಂಡರಿಗೆ ಮಾಹಿತಿ ನೀಡುತ್ತಿಲ್ಲ. ಅಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸುವಂತೆ ಸರ್ಕಾರವನ್ನು ಆದಿವಾಸಿ ಮುಖಂಡರು ಆಗ್ರಹಿಸಿದ್ದಾರೆ.

ತಿತಿಮತಿಯ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಪಿ.ಕೆ.ಸಿದ್ದಪ್ಪ, ಇತ್ತೀಚೆಗೆ ಕೊಡಗು ಜಿಲ್ಲೆಗೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಆಗಮಿಸಿದ್ದ ವೇಳೆ ಗಿರಿಜನ ಮುಖಂಡರಿಗೆ ಮಾಹಿತಿ ನೀಡಬೇಕಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡದೆ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ತಮಗೆ ಬೇಕಾದ ಗಿರಿಜನರ ಹಾಡಿಗಳಿಗೆ ಅಧ್ಯಕ್ಷರನ್ನು ನೆಪ ಮಾತ್ರಕ್ಕೆ ಕರೆದೊಯ್ಯುವ ಮೂಲಕ ಗಿರಿಜನರು ಆಭಿವೃದ್ಧಿ ಆಗಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಒದಗಿಸಿದ್ದಾರೆ. ಸಾಕಷ್ಟು ಗಿರಿಜನ ಹಾಡಿಗಳು ಇನ್ನೂ ಕೂಡ ಹಿಂದುಳಿದಿರುವ ಮಾಹಿತಿಯು ಅಧಿಕಾರಿಗಳಿಗೆ ಲಭ್ಯವಿದ್ದರೂ ಅಲ್ಪ-ಸ್ವಲ್ಪ ಸವಲತ್ತುಗಳನ್ನು ಹೊಂದಿರುವ ಗಿರಿಜನ ಹಾಡಿಗೆ ಅಧಿಕಾರಿಗಳನ್ನು ಹಾಗೂ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಕರೆದೊಯ್ಯುವ ಮೂಲಕ ಜಿಲ್ಲೆಯಲ್ಲಿ ಗಿರಿಜನರು ಸಂಪೂರ್ಣ ಅಭಿವೃದ್ಧಿ ಹೊಂದಿದ್ದಾರೆ ಎಂಬ ತಪ್ಪು ಸಂದೇಶ ನೀಡಿ ಕಳುಹಿಸಿದ್ದಾರೆ. ಇದರಿಂದ ಗಿರಿಜನರಿಗೆ ಅನ್ಯಾಯವಾಗಿದೆ. ಇಂತಹ ಅಧಿಕಾರಿಗಳಿಂದ ಗಿರಿಜನರ ಅಭಿವೃದ್ಧಿ ಸಾಧ್ಯವಿಲ್ಲ. ಇವರನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ತಿತಿಮತಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಮಣಿಕುಂಞ ಮಾತನಾಡಿ, ಈ ಹಿಂದೆ ನಿಗಮ ಅಧ್ಯಕ್ಷರು ಹಾಗೂ ಇನ್ನಿತರ ಪ್ರಮುಖರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಆರಂಭದಲ್ಲಿಯೇ ಗಿರಿಜನ ಮುಖಂಡರ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಗಿರಿಜನರು ನೀಡುವ ವರದಿಯನ್ನು ಸಂಬಂಧಿಸಿದವರ ಮುಂದೆ ಮಂಡಿಸಲಾಗುತ್ತಿತ್ತು. ಇತ್ತೀಚೆಗೆ ಅಧಿಕಾರಿಗಳು ಗಿರಿಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದಲ್ಲದೆ ತಮಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಆದಿವಾಸಿಗಳ ಪ್ರಗತಿಗೆ ಮಾರಕವಾಗುತ್ತಿದೆ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್.ಪಂಕಜಾ ಹಾಗೂ ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಚುಬ್ರು ಮಾತನಾಡಿ, ಜಿಲ್ಲೆಯಲ್ಲಿ ಗಿರಿಜನರು ಕೊಡಗಿನ ಮೂಲ ನಿವಾಸಿಗಳಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಇಂದು ಗಿರಿಜನರು ಅಲೆಮಾರಿ ಜನಾಂಗವಾಗಿ ರೂಪುಗೊಳ್ಳಲು ಕಾರಣವಾಗಿದೆ. ಯರವ, ಸೋಲಿಗ, ಬೆಟ್ಟಕುರುಬ ಸೇರಿದಂತೆ ಇನ್ನಿತರ ಸಮುದಾಯದವರು ಇಲ್ಲಿಯ ಮೂಲ ನಿವಾಸಿಗಳಾಗಿದ್ದಾರೆ. ಇವರನ್ನು ಇದೀಗ ಅಲೆಮಾರಿ ಪಟ್ಟಿಗೆ ಸೇರಿಸಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಗಿರಿಜನರು ಒಪ್ಪುವುದಿಲ್ಲ. ಕೂಡಲೇ ನಮ್ಮನ್ನು ಅಲೆಮಾರಿ ಪಟ್ಟಿಯಿಂದ ಕೈಬಿಡಬೇಕು. ಇಲ್ಲಿನ ಮೂಲ ನಿವಾಸಿಗಳಾಗಿ ಈ ಹಿಂದಿನಂತೆಯೇ ಪರಿಗಣಿಸಬೇಕು. ತಪ್ಪಿದ್ದಲ್ಲಿ ಗಿರಿಜನರು ಮುಂದಿನ ದಿನದಲ್ಲಿ ಹೋರಾಟ ರೂಪಿಸಲಿದ್ದಾರೆ ಎಂದು ಎಚ್ಚರಿಸಿದರು.

ಇಲ್ಲಿಯ ಮೂಲ ನಿವಾಸಿಗಳನ್ನು ಕೆಲವು ಅಧಿಕಾರಿಗಳು ನಿರ್ಲಕ್ಷೃ ಮಾಡಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಅಧಿಕಾರಿಗಳೇ ಕಾರಣ. ಸರ್ಕಾರದ ಸವಲತ್ತುಗಳು ಅರ್ಹ ಗಿರಿಜನರಿಗೆ ಲಭಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಮೂಲಸೌಕರ್ಯಗಳ ಕೊರತೆ ಇರುವ ಜಾಗದಲ್ಲಿ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದರು.

ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳಾದ ಮಲ್ಲಪ್ಪ, ಪಿ.ಕೆ.ಪಾಪು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net