ಜಿಪಂ ಉಪಾಧ್ಯಕ್ಷರಾಗಿ ರಾಜೇಶ್ವರಿ ಕಲ್ಲೇರ ಆಯ್ಕೆ

15-hvr-01
Published on

ಹಾವೇರಿ: ಸ್ಥಳೀಯ ಜಿಪಂಗೆ ನೂತನ ಉಪಾಧ್ಯಕ್ಷೆಯಾಗಿ ತಿಳವಳ್ಳಿ ಜಿಪಂ ಮತಕ್ಷೇತ್ರದ ಕಾಂಗ್ರೆಸ್ ಸದಸ್ಯೆ ರಾಜೇಶ್ವರಿ ಯಲ್ಲಪ್ಪ ಕಲ್ಲೇರ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ಗಿರಿಜವ್ವ ಬ್ಯಾಲದಹಳ್ಳಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. 34 ಸದಸ್ಯ ಬಲದ ಜಿಪಂನಲ್ಲಿ ಕೋರಂ ಭರ್ತಿಗೆ 18 ಸದಸ್ಯರ ಹಾಜರಾತಿ ಅವಶ್ಯವಿತ್ತು. ಸಭೆಯಲ್ಲಿ 21 ಸದಸ್ಯರು ಪಾಲ್ಗೊಂಡಿದ್ದರು.

ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ರಾಜೇಶ್ವರಿ ಕಲ್ಲೇರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಘೊಷಿಸಿದರು. ಉಪಚುನಾವಣಾಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಜಿಪಂ ಸಿಇಒ ರಮೇಶ ದೇಸಾಯಿ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ಬೆಳಗಾವಿ ಪ್ರೊಬೆಷನರಿ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಇತರರಿದ್ದರು. ನಂತರ ರಾಜೇಶ್ವರಿ ಕಲ್ಲೇರ ಅವರನ್ನು ಜಿಪಂ ಸದಸ್ಯರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net