ಜಾನುವಾರುಗಳಿಗೆ ಶೀಪ್ ಪಾಕ್ಸ್ ಲಸಿಕೆ

18SGN01
Published on

ಶಿಗ್ಗಾಂವಿ: ತಾಲೂಕಿನಾದ್ಯಂತ ಲಂಪಿ ಸ್ಕಿನ್ ರೋಗದಿಂದ ಬಳಲುತ್ತಿದ್ದ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆಯು ಚಿಕಿತ್ಸೆ ಜತೆಗೆ ರೋಗ ನಿಯಂತ್ರಣಕ್ಕಾಗಿ ಕುರಿ, ಆಡುಗಳಿಗೆ ಬಳಸುವ ಮೈಲಿಬೇನೆ (ಶೀಪ್ ಪಾಕ್ಸ್) ಲಸಿಕೆ ಹಾಕಲು ಮುಂದಾಗಿದೆ.

ಕಾಯಿಲೆಗೊಳಗಾದ ಜಾನುವಾರು ತೀವ್ರ ಜ್ವರದಿಂದ ಬಳಸುತ್ತಿದ್ದು, ಮೇವು ತಿನ್ನುತ್ತಿಲ್ಲ, ಮೈಮೇಲೆ ಗುಳ್ಳೆಗಳು ಕಂಡುಬರುತ್ತಿವೆ. ಕೆಲ ಜಾನುವಾರುಗಳಿಗೆ ಕಾಲು ಬಾವು ಬರುತ್ತಿದ್ದು, ಮೇಲೆ ಎದ್ದೇಳಲು ಆಗುತ್ತಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಜಾನುವಾರುಗಳು ನೋವು ಅನುಭವಿಸುತ್ತೀವೆ. ತಾಲೂಕಿನ ಹುಲಿಕಟ್ಟಿ, ಶಿಡ್ಲಾಪುರ, ಹುನಗುಂದ, ಮುಗಳಿಕಟ್ಟಿ, ಚಂದಾಪುರ, ತಡಸ, ಮುತ್ತಳ್ಳಿ, ಶ್ಯಾಡಂಬಿ ಸೇರಿದಂತೆ ಇತರ ಗ್ರಾಮಗಳಲ್ಲಿ ಜಾನುವಾರುಗಳಿಗೆ ಲಂಪಿ ಸ್ಕಿನ್ ಕಾಯಿಲೆ ವ್ಯಾಪಕವಾಗಿ ಹರಡಿದೆ.

ರೋಗ ಲಕ್ಷಣ ಕಂಡುಬಂದ ಗ್ರಾಮಗಳಲ್ಲಿ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳ ತಂಡ ಚಿಕಿತ್ಸೆ ನೀಡುತ್ತಿದೆ. ಅಲ್ಲದೆ, ತಜ್ಞ ವೈದ್ಯರ ಸಲಹೆಯಂತೆ ಕಾಯಿಲೆ ಹತೋಟಿಗಾಗಿ ಕುರಿ, ಆಡುಗಳಿಗೆ ಬರುವ ಮಾರಕ ರೋಗ ಮೈಲಿ ಬೇನೆ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮವಾಗಿ ಬಳಸುವ ಮೈಲಿಬೇನೆ ಲಸಿಕೆ ಪ್ರಯೋಗ ಮಾಡುತ್ತಿದ್ದಾರೆ. ಈಗಾಗಲೇ ರೋಗ ಉಲ್ಬಣಗೊಂಡ ಗ್ರಾಮಗಳಲ್ಲಿ ಕಾಯಿಲೆಗೆ ಒಳಪಡದ ಆರೋಗ್ಯವಂತ ಸುಮಾರು 10 ಸಾವಿರ ಜಾನುವಾರುಗಳಿಗೆ ಈ ಲಸಿಕೆ ಹಾಕಲಾಗುತ್ತಿದೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.

ಲಂಪಿ ಸ್ಕಿನ್ ಪೀಡಿತ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ರೈತ ಚಿಂತಾಕ್ರಾಂತರಾದ ಕುರಿತು ಸೆ. 17ರಂದು ‘ದನಕರುಗಳಿಗೂ ಹೆಮ್ಮಾರಿ’ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net