ಜಾನಪದ ಕ್ಷೇತ್ರದಲ್ಲಿ ಎಚ್.ಎಲ್.ನಾಗೇಗೌಡರ ಸಾಧನೆ ಅಪರಿಮಿತ

IMG_4299
Published on

ನಾಗಮಂಗಲ: ಜಾನಪದ ಕ್ಷೇತ್ರದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರು ಮಾಡಿರುವ ಸಾಧನೆ ಅಪರಿಮಿತ ಎಂದು ಸಂಶೋಧಕ, ಸಾಹಿತಿ ಮಹಮದ್ ಕಲೀಂಉಲ್ಲಾ ಬಣ್ಣಿಸಿದರು.


ತಾಲೂಕಿನ ಬಿಂಡಿಗನವಿಲೆ ಹೋಬಳಿ ಕದಬಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಎಚ್.ಎಲ್.ನಾಗೇಗೌಡರ ಕುರಿತು ಉಪನ್ಯಾಸ ನೀಡಿದರು.


ಎಚ್.ಎಲ್.ನಾಗೇಗೌಡರು ಜಿಲ್ಲಾಧಿಕಾರಿಯಾಗಿದ್ದರೂ ಜನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಅವರು ಇಲಾಖೆಯ ಕಾರ್ಯದ ಮೇಲೆ ಯಾವುದೇ ಊರಿಗೆ ಹೋದರೂ ಅಲ್ಲಿನ ಜನಪದ ಅಧ್ಯಯನ ಮಾಡುವುದರ ಜತೆಗೆ ಅದನ್ನು ಸಂಗ್ರಹ ಮಾಡುವ ಕೆಲಸ ಮಾಡುತ್ತಿದ್ದರು.ಅವರು ರಾಮನಗರದ ಬಳಿ ಸ್ಥಾಪಿಸಿದ ಜಾನಪದ ಲೋಕ ವಿಶಿಷ್ಟವಾಗಿದ್ದು, ಪ್ರವಾಸಿಗರನ್ನು ಸೆಳೆಯುವುದಲ್ಲದೆ, ಜನಪದರ ಬಗ್ಗೆ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕವಾಗಿದೆ ಎಂದರು.


ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಸಿ.ಮೋಹನ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದ ಬಾಯಿಂದ ಬಾಯಿಗೆ ಹರಿದಾಡುವುದಾಗಿದೆ. ಜನಪದ ಗೀತೆಗಳು, ಅದರ ಕಲಾ ಪ್ರಕಾರಗಳಾದ ರಂಗಕುಣಿತ, ಕೋಲಾಟ, ಪಟ ಕುಣಿತ, ಪೂಜಾಕುಣಿತ ಸೇರಿದಂತೆ ಹಲವು ಕಲೆಗಳನ್ನು ನೋಡಿದಾಗ ಮೈ ಪುಳಕಗೊಳ್ಳುತ್ತದೆ ಎಂದರು.ಜನಪದವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಸಿ.ಎನ್.ಅಶೋಕ್, ಸಾಹಿತಿ ಹೆರಗನಹಳ್ಳಿ ದಿನೇಶ್ ಮಾತನಾಡಿದರು.


ಕವಿ ನಾ.ರೈತ ಕವನ ವಾಚಿಸಿದರು. ಜನಪದ ಗಾಯಕ ಚಾಮನಕೊಪ್ಪಲು ಗೋವಿಂದರಾಜು ಜನಪದ ಗೀತೆಗಳನ್ನು ಹಾಡಿದರು.
ಲಾಳನಕೆರೆ ಗ್ರಾಪಂ ಸದಸ್ಯ ಧರಣಿ, ಸಹ ಶಿಕ್ಷಕರಾದ ಹ.ವೆಂ. ಮಂಜೇಗೌಡ, ಪ್ರೇಮಾ, ಪ್ರಭಾರ ಮುಖ್ಯಶಿಕ್ಷಕ ಕೆ.ಎನ್.ಲಿಂಗರಾಜು, ಹಿರಿಯ ಕಲಾವಿದ ದಾಸೇಗೌಡ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net