ಜಾತಿಗೆ ಧರ್ಮ ಶಾಸ್ತ್ರದಲ್ಲಿ ಸಮರ್ಥನೆ ಇಲ್ಲ

bkt-2-5
Published on

ಬಾಗಲಕೋಟೆ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾನವರಿಗೆ. ಧರ್ಮ ಯಾವುದೇ ಇರಲಿ ಮನುಷ್ಯ. ಒಳ್ಳೆಯವನಾದರೆ ಸಾಕು. ಜಾತಿವ್ಯವಸ್ಥೆ ಅರ್ಥಹೀನ, ಇದಕ್ಕೆ ಯಾವುದೇ ಧರ್ಮಶಾಸ್ತ್ರಗಳಲ್ಲಿ ಸಮರ್ಥನೆಗಳಿರುವುದಿಲ್ಲ. ಜಾತಿಯನ್ನು ಹೇಳಬೇಡ, ಕೇಳಬೇಡ, ಯೋಚಿಸಬೇಡ. ಭಾಷೆ, ವೇಷಭೂಷಣ, ರೂಪ, ವರ್ತನೆಗಳಲ್ಲಿ ವ್ಯತ್ಯಾಸವಿದ್ದರೂ ಮಾನವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು ಎಂಬ ಸತ್ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಶ್ರೀ ಶರಣಬಸವ ಅಪ್ಪಂಗಳ ಆಶ್ರಮದಲ್ಲಿ ಜರುಗಿದ ನಾರಯಾಣ ಗುರುಗಳ ಜಯಂತಿಯ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿರವರು ಆಚರಣೆಗಳಲ್ಲಿ ವ್ಯತ್ಯಾಸವಿದ್ದರೂ ಎಲ್ಲಾ ಧರ್ಮಗಳ ಅಂತಿಮಗುರಿ ಒಂದೇ ಆಗಿದೆ. ಪರಧರ್ಮ ನಿಂದಕನು ಸ್ವಧರ್ಮ ದ್ರೋಹಿಯಾಗಿರುತ್ತಾನೆ. ಪರಧರ್ಮ ಎಷ್ಟೇ ಉನ್ನತ ಹಾಗೂ ಸುಖದಾಯಕವೆಂದು ಭಾವಿಸಿದರೂ ಸ್ವಧರ್ಮದಲ್ಲಿಯೇ ಬದುಕಿ ಸಾಯುವುದೇ ಲೇಸು. ದೇವರನ್ನು ಹುಡುಕಬೇಡ, ನಿನ್ನಲ್ಲಿಯೇ ಇದ್ದಾನೆ.

ನಾರಯಾಣ ಗುರುಗಳು ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದರು. ಕೇರಳದ ಜಾತಿ-ಮುಕ್ತ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಜ್ಞಾನೋದಯ ಮತ್ತು ಸಾಮಾಜಿಕ ಸಮಾನತೆಯನ್ನು ಬೆಳೆಸಲು, ಅವರು ಅನ್ಯಾಯದ ವಿರುದ್ಧ ಸುಧಾರಣಾ ಪ್ರಯತ್ನವನ್ನು ಪ್ರಾರಂಭಿಸಿದ ಮಹಾಂತರು. 

ನಾರಯಾಣ ಗುರುಗಳು ಗಮನಾರ್ಹ ಸಮಾಜ ಸುಧಾರಕ, ಅವರು ಸಾರ್ವತ್ರಿಕ ದೇವಾಲಯ ಪ್ರವೇಶಕ್ಕಾಗಿ ಮತ್ತು ಅಸ್ಪೃಶ್ಯರ ಸಾಮಾಜಿಕ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧದ ಚಳವಳಿಯ ಮುಂಚೂಣಿಯಲ್ಲಿದ್ದರು.

ಜಾತಿ ವಿಷಮತೆಯ ಅಂಧಕಾರದಿಂದ ಕೆಳಜಾತಿಯವರನ್ನು ಮೇಲೆತ್ತಲು ಶಿಕ್ಷಣ ಒಂದೇ ದಾರಿ. ಶಿಕ್ಷಣದ ಮೂಲಕ ಅವರ ಆತ್ಮವಿಶ್ವಾಸ ಮತ್ತು ಕೇವಲ ಶಿಕ್ಷಣ ಮಾತ್ರ ಬಡವರನ್ನು ಪ್ರಬಲರನ್ನಾಗಿ ಮಾಡಬಲ್ಲದು. ಹಾಗಾಗಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ, ಉದ್ಯಮದಿಂದ ಅಭಿವೃದ್ಧಿ ಹೊಂದಿರಿ’’ ಎಂದು ಸಾರ್ವಕಾಲಿಕವಾದಂತಹ ಕರೆ ಕೊಟ್ಟವರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net