ಜಾತಿ-ಧರ್ಮಗಳ ಸಂಕೋಲೆ ಬೇಡ

21hbd1
Published on

ಹಳೇಬೀಡು: ಇಲ್ಲಿನ ಐತಿಹಾಸಿಕ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಗಣ್ಯರು, ವಿದ್ಯಾರ್ಥಿಗಳು ಹಾಗೂ ನೂರಾರು ಜನ ಯೋಗಾಸಕ್ತರು ಯೋಗ ಪ್ರದರ್ಶನ ನೀಡಿದರು.

ಕೇಂದ್ರ ಪುರಾತತ್ವ ವಿಭಾಗದ ಸಹಯೋಗದಲ್ಲಿ ವಿವಿಧ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿತು. ಹಳೇಬೀಡು ಪಟ್ಟಣ, ಬೇಲೂರು, ಹಾಸನ, ಚಿಕ್ಕಮಗಳೂರು ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬಿಳಿ ಶ್ವೇತ ವಸ್ತ್ರಧಾರಿಗಳಾಗಿದ್ದ ಯೋಗಪಟುಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಬೆಳಗ್ಗೆ 6 ಗಂಟೆಗೆ ರಾಷ್ಟ್ರಗೀತೆಯೊಂದಿಗೆ ಯೋಗಾಭ್ಯಾಸ ಆರಂಭಿಸಲಾಯಿತು. ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಎಚ್.ಕೆ.ಸುರೇಶ್, ಜಿಲ್ಲಾಧಿಕಾರಿ, ಉಪ-ವಿಭಾಗಾಧಿಕಾರಿ, ತಹಸೀಲ್ದಾರ್ ಮತ್ತು ಆಡಳಿತ ಸಿಬ್ಬಂದಿ ಜತೆಗೂಡಿ ಯೋಗಾಭ್ಯಾಸ ನಡೆಸಿದರು. 300ಕ್ಕೂ ಅಧಿಕ ಶಾಲಾ-ಕಾಲೇಜು ಮಕ್ಕಳು, 200ಕ್ಕೂ ಹೆಚ್ಚು ಜನರು ಎರಡು ಗಂಟೆ ಕಾಲ ನಡೆಸಿಕೊಟ್ಟ ಯೋಗ ಪ್ರದರ್ಶನ ದೇಗುಲ ವೀಕ್ಷಿಸಲು ಬಂದಿದ್ದ ಪ್ರವಾಸಿಗರ ಕಣ್ಮನ ಸೆಳೆಯಿತು.

ಮೊಳೆತು ಬೆಳೆದಿರುವ ಹೆಮ್ಮರಗಳು

ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಪ್ರತೀಕವಾಗಿ ಜೂ.21ರಂದು ಇಡೀ ವಿಶ್ವವೇ ಯೋಗ ದಿನವನ್ನು ಆಚರಿಸುತ್ತಿದೆ. ವಸುದೈವ ಕುಟುಂಬಕಂ ಮತ್ತು ಯೋಗದಿಂದ ಆರೋಗ್ಯ ಎಂಬುದು ನಮ್ಮ ಪ್ರಾಚೀನ ಋಷಿ-ಮುನಿಗಳ ಕಾಲದಿಂದಲೂ ಪ್ರಚಲಿತದಲ್ಲಿರುವ ಸಂಗತಿ. ಯೋಗಾಭ್ಯಾಸವನ್ನು ಕೇವಲ ಒಂದು ದಿನಕ್ಕೆ ಅಥವಾ ಪ್ರದರ್ಶನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ರೂಢಿಸಿಕೊಂಡರೆ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ಇಂದ್ರಿಯಗಳು ನಮ್ಮ ವಶವಾಗುತ್ತದೆ. ಆಗ ಸಮಾಜದಲ್ಲಿ ಸಭ್ಯತೆ ಮತ್ತು ಸ್ವಾಸ್ಥ್ಯವು ತಾನಾಗೇ ವೃದ್ಧಿಯಾಗುತ್ತದೆ. ವಿರೋಧ ಪಕ್ಷಗಳು ಇದರಲ್ಲೂ ರಾಜಕೀಯವನ್ನು ತಂದಿಟ್ಟು ಜಾತಿ-ಧರ್ಮಕ್ಕೆ ಸೀಮೀತಗೊಳಿಸುವ ಪ್ರಯತ್ನ ಮಾಡುತ್ತಿವೆ. ಇದರಿಂದ ಅವರಿಗೆ ನಷ್ಟವೇ ಹೊರತು ಯೋಗವನ್ನು ಅನುಸರಿಸುವ ಜನರಿಗಲ್ಲ ಎಂದು ಹೇಳಿದರು.

ಸುಶ್ರುತನ ಆಯುರ್ವೇದ, ಪತಂಜಲಿಯ ಯೋಗ, ಕೌಟಿಲ್ಯನ ಅರ್ಥಶಾಸ್ತ್ರ, ಆರ್ಯಭಟನ ಗಣಿತ ಮುಂತಾದವು ಭಾರತದಲ್ಲಿ ಮೊಳೆತು ಬೆಳೆದಿರುವ ಹೆಮ್ಮರಗಳು. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಇಷ್ಟು ವರ್ಷ ನಮ್ಮ ಬೇರನ್ನು ಮರೆತಿದ್ದೆವು. ಈಗ ಕೇಂದ್ರ ಸರ್ಕಾರ ಭಾರತೀಯತೆಗೆ ಪುನಶ್ಚೇತನ ನೀಡುತ್ತಿದ್ದು ಜನರಲ್ಲಿ ಸುಪ್ತವಾಗಿ ಅಡಗಿದ್ದ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಹಳೇಬೀಡು ಒಳಗೊಂಡಂತೆ ಕರ್ನಾಟಕದ ವಿವಿಧ ಐತಿಹಾಸಿಕ ತಾಣಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಯೋಗ ದಿನ ಆಚರಿಸುತ್ತಿರುವುದು ಶ್ಲಾಘನೀಯ. ಇಂದು ನಮ್ಮ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಗಳ ವೈಭವ ಪ್ರಪಂಚಕ್ಕೇ ತಿಳಿಯುವಂತಾಗಿದೆ ಎಂದರು.

ಪುಷ್ಪಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಯೋಗ ಸಂದೇಶ ನೀಡಿದರು. ಯೋಗಾಭ್ಯಾಸ ಹೇಳಿಕೊಟ್ಟ ಸುಬ್ರಹ್ಮಣ್ಯ ಗುರೂಜಿ ಅವರನ್ನು ಗಣ್ಯರು ಸನ್ಮಾನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಉಪ ವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಎಂ.ಮಮತಾ, ಸ್ಮಾರಕ ಸಂರಕ್ಷಣಾಧಿಕಾರಿ ಸುನೀಲ್, ರಾಘವನ್, ಗ್ರಾಪಂ ಅಧ್ಯಕ್ಷ ಮಧುಕುಮಾರ್, ಯೋಗ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.

ನೇರ ಪ್ರಸಾರಕ್ಕೆ ಅಡ್ಡಿ

ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು ವೇದಿಕೆಯ ಮುಂಭಾಗದಲ್ಲಿ ವೀಕ್ಷಣೆಗಾಗಿ ಕುಳಿತಿದ್ದರು. ಆದರೆ, ಮೋದಿ ಅವರ ಭಾಷಣದ ಸಮಯಕ್ಕೆ ಸರಿಯಾಗಿ ಲೈವ್ ಫೀಡ್ ಕೈಕೊಟ್ಟಿತು. ಇದರಿಂದ ವಿಚಲಿತರಾದ ಸಚಿವ ವಿ.ಸೋಮಣ್ಣ ಅಧಿಕಾರಿಗಳ ಮೇಲೆ ಸಿಟ್ಟಾದರು. ಆಧುನಿಕ ವ್ಯವಸ್ಥೆಗಳೆಲ್ಲ ಇದ್ದರೂ ನೇರಪ್ರಸಾರಕ್ಕೆ ತೊಡಕಾಗಿದ್ದು ಏಕೆ ಎಂದು ಕೋಪಗೊಂಡರು. ಬಳಿಕ ತಮ್ಮ ಮೊಬೈಲ್‌ನಲ್ಲೇ ಭಾಷಣವನ್ನು ವೀಕ್ಷಿಸಲು ಆರಂಭಿಸಿದರು. 10 ನಿಮಿಷದ ಬಳಿಕ ಮತ್ತೆ ಪ್ರಸಾರ ಆರಂಭಿಸಿದ ಬಳಿಕ ಸಚಿವರು ತಣ್ಣಗಾದರು.

ಯೋಗವೆಂದರೆ ಧರ್ಮ-ಕರ್ಮಗಳ, ದೇಹ-ಆತ್ಮದ ಸಮ್ಮಿಲನ. ಜೀವನದಲ್ಲಿ ಇದೊಂದು ಅಪೂರ್ವ ಘಟ್ಟವಾಗಿರುತ್ತದೆ. ನಮ್ಮ ಬುದ್ಧಿ ಅಥವಾ ಮನಸ್ಸು ನಿಯಂತ್ರಣದಲ್ಲಿ ಇರಬೇಕೆಂದರೆ ಸಂಯೋಗದ ಅವಶ್ಯಕತೆ ಇದೆ. ಅದು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ. ಭಾರತದ ಆತ್ಮವಾಗಿದ್ದ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಷ್ಟು ಅಭಿನಂದಿಸಿದರೂ ಸಾಲದು.

ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಪೀಠಾಧ್ಯಕ್ಷರು, ಪುಷ್ಪಗಿರಿ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net