ಜಾತಿ ಜನಗಣತಿಗೆ ವಿರೋಧ ಬೇಡ

22 yelandur 01
Published on

ಯಳಂದೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಜಾತಿ ಜನಗಣತಿ ಅತೀ ಹಿಂದುಳಿದ ವರ್ಗಗಳಿಗೆ ಹೆಚ್ಚು ಉಪಯೋಗವಾಗುವುದರಿಂದ ಯಾರೂ ವಿರೋಧಿಸಬಾರದು ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸೋಮವಾರ ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ನಿವಾಸದಿಂದಲೇ ಜಾತಿ ಗಣತಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಹಿಂದೆಯೇ ಕಾಂತರಾಜು ವರದಿಯನ್ನು ಸಲ್ಲಿಸಲಾಗಿತ್ತು. ಆದರೆ, ಅಂಗೀಕಾರವಾಗಿಲ್ಲ. ಈಗ ಈ ವಿಷಯ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ವಾಸಿಸುವ ಪ್ರತಿಯೊಂದ ಜನಾಂಗದವರು, ಸಾಮಾಜಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಸೇರಿದಂತೆ ಇತರ ವಿಷಯಗಳಲ್ಲಿ ಸಮುದಾಯಗಳು ಯಾವ ಹಂತದಲ್ಲಿದೆ ಎಂಬುದನ್ನು ಅರಿಯಲು ಇದೊಂದು ಉತ್ತಮ ಕೆಲಸ ಮಾಡಲಿದೆ ಎಂದರು.

ರಾಜ್ಯದಲ್ಲಿರುವ ಅನೇಕ ಸಮಾಜಗಳಿಗೆ ತಮ್ಮ ಜಾತಿ ಯಾವುದು ಎಂಬುದರ ಬಗ್ಗೆ ಅರಿವೇ ಇಲ್ಲ. ಹಿಂದೆ ಹಿಂದುಳಿದ ವರ್ಗಗಳ ಸಚಿವನಾಗಿದ್ದಾಗ ಈ ಬಗ್ಗೆ ಅನೇಕ ಮಾಹಿತಿ ಪಡೆದುಕೊಂಡಿದ್ದೇನೆ. ಅನೇಕ ಜಾತಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿವೆ. ಅಭಿವೃದ್ಧಿ ದೃಷ್ಟಿಯಿಂದ ಇವರಿಗೆ ಸಂವಿಧಾನದಡಿಯಲ್ಲಿ ಸಿಗುವ ಎಲ್ಲ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಈ ಗಣತಿ ಮಹತ್ತರ ಪಾತ್ರವನ್ನು ವಹಿಸಿದೆ. ಹಾಗಾಗಿ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಎಲ್ಲರೂ ಸರಿಯಾದ ಮಾಹಿತಿ ನೀಡಬೇಕು. ರಾಜ್ಯ ಸರ್ಕಾರ ನಡೆಸುತ್ತಿರುವ ಈ ಮಹತ್ವದ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದಿಲೀಪ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 163 ಗಣತಿದಾರರು ನೇಮಕವಾಗಿದ್ದಾರೆ. 26 ಸಾವಿರ ಕುಟುಂಬಗಳಿವೆ. 16 ಸೂಪರ್‌ವೈಸರ್‌ಗಳು 6 ಜನ ಮಾಸ್ಟರ್ ಟ್ರೈನರ್ಸ್‌ಗಳನ್ನು ನೇಮಕ ಮಾಡಲಾಗಿದೆ. ಅ.7 ರವರೆಗೆ ಗಣತಿ ನಡೆಯಲಿದೆ. ಇದಕ್ಕಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು ಈಗಾಗಲೇ ತರಬೇತಿ ನೀಡಲಾಗಿದೆ. ಆದರೆ, ಸೋಮವಾರ ಆ್ಯಪ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸಮೀಕ್ಷೆಗೆ ತೊಡಕಾಗಿದೆ. ಸರಿಯಾದ ನಂತರ ಸಮೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಿಆರ್‌ಪಿ ರೇಚಣ್ಣ, ವಿಸ್ತರಣಾಧಿಕಾರಿ ವಿನೋದ್, ಸಿ.ಸೋಮಣ್ಣ, ಲಕ್ಷ್ಮೀ ಬಿಳಿಗಿರಿ, ಸತೀಶ್, ಶಿವರಾಮು, ಸೌಮ್ಯಾ ಇದ್ದರು.

-------------------

22ವೈಎಲ್‌ಡಿ ಚಿತ್ರ01

ಯಳಂದೂರು ತಾಲೂಕು ಉಪ್ಪಿನಮೋಳೆ ಗ್ರಾಮದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮನೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸೋಮವಾರ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net