ಜಾತಿ ಜನಗಣತಿ ವರದಿ ಅವೈಜ್ಞಾನಿಕ

Oplus_131072
Oplus_131072
Published on

ನಂಜನಗೂಡು: ರಾಜ್ಯ ಸರ್ಕಾರ ಅನುಮೋದಿಸಲು ಹೊರಟಿರುವ ಜಾತಿ ಜನಗಣತಿ ಅವೈಜ್ಞಾನಿಕವಾಗಿದ್ದು, ರಾಜ್ಯದ ವೀರಶೈವ ಲಿಂಗಾಯತರ ಒಟ್ಟು ಜನಸಂಖ್ಯೆಗೆ ವ್ಯತಿರಿಕ್ತವಾಗಿ ವರದಿ ನೀಡಿದೆ. ನಮ್ಮ ಸಮುದಾಯಕ್ಕೆ ಸರ್ಕಾರ ಅನ್ಯಾಯವೆಸಗಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಆರೋಪಿಸಿದರು.

ರಾಜ್ಯದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ವೀರಶೈವ ಲಿಂಗಾಯತ ಸಮುದಾಯವನ್ನು ವರದಿಯಲ್ಲಿ ಸಮಾಜದ ಉಪ ಜಾತಿಗಳನ್ನು ಬೇರ್ಪಡಿಸಿ ಜನಸಂಖ್ಯೆಯನ್ನು ಕಡಿಮೆ ತೋರಿಸುವ ಮೂಲಕ ಸರ್ಕಾರ ಬಹುಸಂಖ್ಯಾತ ಸಮಾಜಕ್ಕೆ ಅನ್ಯಾಯ ಮಾಡಲು ಹೊರಟಿದೆ. ವರದಿಯನ್ನು ಒಪ್ಪದ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ಬಗ್ಗೆ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಬೇಲೂರು ಗೋಪಾಲಕೃಷ್ಣ, ರಾಮಚಂದ್ರಪ್ಪ ಮುಂತಾದ ನಾಯಕರು ಅಗೌರವವಾಗಿ ಮಾತನಾಡುತ್ತಿದ್ದಾರೆ. ನಮ್ಮ ನಾಯಕರ ಬಗ್ಗೆ ತುಚ್ಛವಾಗಿ ಮಾತನಾಡುವುದನ್ನು ಮಹಾಸಭಾ ಖಂಡಿಸುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಜಾತಿಗಣತಿ ವರದಿಯಲ್ಲಿ ಲೋಪವಿದೆ. ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಹೇಳಿದ್ದಾರೆ. ಸರ್ಕಾರ ಕೂಡಲೇ ಹತ್ತು ವರ್ಷ ಹಿಂದಿನ ಅವೈಜ್ಞಾನಿಕ ವರದಿಯನ್ನು ಹಿಂಪಡೆದು ಹೊಸದಾಗಿ ಜಾತಿ ಗಣತಿ ನಡೆಸಬೇಕು ಎಂದರು.

ಶಿವಪ್ಪ ದೇವರು, ನಂದಿನಿ ಮಹೇಶ್, ಬದನವಾಳು ಮಹೇಶ್, ಮಡಹಳ್ಳಿ ನಟರಾಜು, ಹೆಗ್ಗಡಹಳ್ಳಿ ರೇವಣ್ಣ, ಮಂಜುನಾಥ್, ಮಲ್ಕುಂಡಿ ಮಹದೇವಸ್ವಾಮಿ, ರಾಜೇಂದ್ರ ಪ್ರಸಾದ್, ನವೀನ್, ಪಟೇಲ್ ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net