ಜಾತಿ-ಗಣತಿ ವರದಿಯಲ್ಲಿ ಕೆನೆ ಪದರು ಶಿಪಾರಸ್ಸು

bkt-26-1
Published on

ಬಾಗಲಕೋಟೆ: ಜಯಪ್ರಕಾಶ ಹೆಗ್ಗಡೆ ಅವರು ಸಲ್ಲಿಸಿರುವ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತ ವರದಿಯ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ. ಆದರೆ, ವಿಪಕ್ಷಗಳು ವಿರೋಧ ಮಾಡುವುದಕ್ಕಾಗಿ ವಿರೋಧ ಮಾಡುತ್ತಿವೆ. ಯಾವ ಪಕ್ಷದ ಮುಖಂಡರಾಗಲಿ ಬೇಕಿದ್ದರೆ ಜಾತಿ ಗಣತಿ ಮಾಡಲೇಬಾರದು ಎಂದು ಹೇಳಲಿ ನೋಡೋಣ. ಸುಮ್ಮನೆ ಅದು, ಇದು ಎಂದು ಕುಂಯಿ ಕುಂಯಿ ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಬಾಗಲಕೋಟೆ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವರದಿಯಲ್ಲಿ ಕೆನೆಪದರ ಶಿಪಾರಸು ಮಾಡಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿಯನ್ನು ಅಳೆದು ತೂಗಿ ಆರ್ಥಿಕವಾಗಿ ಹಿಂದುಳಿದವರಿಗೆ ಕೊಡಬೇಕು ಎನ್ನುವ ಶಿಪಾರಸು ಇದೆ. ಸರ್ಕಾರ ಕೆನೆಪದರ ಅನುಷ್ಠಾನ ಮಾಡಿಯೇ ಮಾಡಬೇಕಾಗುತ್ತದೆ. ವಿಪಕ್ಷಗಳು ಈ ವರದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ತಯಾರಿಲ್ಲ. ಸಿದ್ದರಾಮಯ್ಯ ಹಿಂದುಳಿದವರನ್ನು ಮುಗಿಸಿಬಿಟ್ಟರು, ಜಾತಿ ಒಡೆದುಬಿಟ್ಟರು ಎಂದು ಆರೋಪಿಸಿದರೆ ಅರ್ಥ ಏನು ಎಂದು ಪ್ರಶ್ನಿಸಿದರು.

ಗಣತಿಯಲ್ಲಿ ಅಂಕಿ ಸಂಖ್ಯೆಯಲ್ಲಿ ಏರುಪೇರು ಆಗಿದೆ ಎನ್ನುವ ಮಾತುಗಳು ಇವೆ. ವೀರಶೈವ ಲಿಂಗಾಯರಲ್ಲಿ ಕೆಲವರು ಲಿಂಗಾಯತ, ಕೆಲವರು ವೀರಶೈವ ಮತ್ತೆ ಕೆಲವರು ತಮ್ಮ ಉಪಜಾತಿ ಬರೆಸಿದ್ದಾರೆ. ಈ ಬಗ್ಗೆ ಏನು ಮಾಡಬೇಕು? ಅದನ್ನು ಸರಿಪಡಿಸುವ ಕೆಲಸ ಮಾಡೋಣ. ಅದೆಲ್ಲವನ್ನು ಬಿಟ್ಟು ವಿಪಕ್ಷದವರು ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ ಎನ್ನುವ ಸಣ್ಣತನದ ಮಾತುಗಳು ಸರಿಯಲ್ಲ. ಹಾಗಿದ್ದರೆ ವಿಪಕ್ಷಗಳು ಹೇಳಿಬಿಡಲಿ ಯಾವುದೇ ಕಾರಣಕ್ಕೂ ಜಾತಿ ಗಣತಿ ಮಾಡಲೇಬಾರದು ಎಂದು ಹೇಳುತ್ತಾರಾ ಎಂದರು.

ಬಿಜೆಪಿಯವರು ಮಾತ್ರವಲ್ಲ, ಕಾಂಗ್ರೆಸ್‌ನಲ್ಲೂ ಹಲವರು ಈ ಬಗ್ಗೆ ಅಪಸ್ವರ ಎತ್ತಿದ್ದಾರೆಲ್ಲ ಎನ್ನುವ ಪ್ರಶ್ನೆಗೆ, ಕಾಂಗ್ರೆಸ್ ಮುಖಂಡರ ಮಾತು ಬೇರೆ ಇದೆ, ಬಿಜೆಪಿ ಮುಖಂಡರ ಮಾತು ಬೇರೆ ಇದೆ. ಇವರಿಬ್ಬರಿಗೂ ಉತ್ತರ ಕೊಡುತ್ತಿದ್ದೇವೆ. ಯಾರು ಏನೇ ಹೇಳಿದರೂ ನಮ್ಮ ಸರ್ಕಾರ ಬಡವರ ಪರ ಕೆಲಸ ಮಾಡುತ್ತದೆ. ಎಲ್ಲರಿಗೂ ನ್ಯಾಯ ಕೊಡೆಸುವ ಕೆಲಸ ಮಾಡುತ್ತೇವೆ. ಅದು ನಿಲ್ಲುವುದಿಲ್ಲ ಎಂದ ಅವರು, ರಡ್ಡಿ ಸಮಾಜದ ಅನೇಕರು ಲಿಂಗಾಯತ ಎಂದು ಬರೆಸಿದ್ದಾರೆ. ಹೀಗಾಗಿ ಅವರ ಜನಸಂಖ್ಯೆ ಕಡಿಮೆ ಆಗಿರಬಹುದು. ಹೀಗೆ ಸಣ್ಣಪುಟ್ಟ ಏರುಪೇರು ಇದ್ದು, ಅವುಗಳನ್ನು ಸರಿಪಡಿಸಿ, ವರದಿ ಅನುಷ್ಠಾನಗೊಳಿಸಿ ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net