

ಗೋಣಿಕೊಪ್ಪ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೆ ಮಾತ್ರ ಏಡ್ಸ್ ತಡೆಗಟ್ಟಲು ಸಾಧ್ಯ ಎಂದು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಅಭಿಪ್ರಾಯಪಟ್ಟರು.
ಕಾವೇರಿ ಕಾಲೇಜು ಗೋಣಿಕೊಪ್ಪಲು ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೊಡಗು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಡಗು, ಕಾವೇರಿ ಕಾಲೇಜು ಗೋಣಿಕೊಪ್ಪಲು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಕಾಲೇಜು ಹಾಗೂ ಗೋಣಿಕೊಪ್ಪಲು ಖಾಸಗಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಏಡ್ಸ್ ಕುರಿತು ಬೀದಿ ನಾಟಕ ಮತ್ತು ಫ್ಲಾಶ್ ಮಾಬ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಚ್‌ಐವಿ, ಏಡ್ಸ್ ಎಂದರೇನು ಅದು ಹೇಗೆ ಬರುತ್ತದೆ, ಅದನ್ನು ತಡೆಗಟ್ಟಲು ಏನು ಮಾಡಬೇಕು ಎಂದು ಜನರಿಗೆ ತಿಳಿಸಬೇಕು. ಇದರಿಂದ ಎಚ್‌ಐವಿ, ಏಡ್ಸ್ ತಡೆಗಟ್ಟಲು ಸಾಧ್ಯವಾಗುತ್ತದೆ. ಏಡ್ಸ್ ತಡೆಗಟ್ಟಲು ಜಾಗೃತಿ ಒಂದೇ ಉತ್ತಮ ಮಾರ್ಗ ಎಂದು ತಿಳಿಸಿದರು. ಗೋಣಿಕೊಪ್ಪಲು ಸಮುದಾಯದ ಆರೋಗ್ಯ ಕೇಂದ್ರ ಐಟಿಟಿಸಿ ಆಪ್ತ ಸಮಾಲೋಚಕ ಚಂದ್ರಶೇಖರ್ ಮಾತನಾಡಿ, ಎಚ್‌ಐವಿ ಏಡ್ಸ್ ತಡೆಗಟ್ಟಲು ಸಮುದಾಯ ಆರೋಗ್ಯ ಕೇಂದ್ರ ಭೇಟಿ ನೀಡಿ ಮಾಹಿತಿ ನೀಡಬಹುದು, ಇಲ್ಲವೇ ಸಹಾಯವಾಣಿ 1097ಗೆ ದೂರವಾಣಿ ಮಾಡಿ ತಿಳಿಸಬಹುದು, ಅದನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಗೋಣಿಕೊಪ್ಪಲು, ಕಾವೇರಿ ಪದವಿ ಕಾಲೇಜು ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್‌ಕುಮಾರ್, ಎನ್.ಪಿ.ರೀತಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಾನ್ಸಿ, ಸಚಿನ್, ವಿಷ್ಣು, ಅರ್ಜುನ್, ಸಮೃದ್, ನಂದನ್, ಅಮುಲ್, ವೈಷ್ಣವ್, ಅಪ್ಸಲ್, ಧನ್ಯಾ, ದರ್ಶಿನಿ, ಮಂಜುಳಾ, ಕವಿತಾ, ಬೃಂದವನ್, ವಿಷ್ಮಾ, ದೀಕ್ಷೀತಾ, ತನುಷಾ, ದೀಕ್ಷಾ ಬೋಜಮ್ಮ, ಗೀಷ್ಮಾ ಉತ್ತಪ್ಪ, ಕೀರ್ತಿ ಕಾವೇರಮ್ಮ ಮುಂತಾದವರು ಜಾಗೃತಿ ನೃತ್ಯ ಮತ್ತು ಬೀದಿ ನಾಟಕವನ್ನು ಕಾಲೇಜು ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ ನೀಡಿದರು.
ಗೋಣಿಕೊಪ್ಪಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಸನ್ನಕುಮಾರ್, ಪೊಲೀಸ್ ಸಿಬ್ಬಂದಿ, ಅಧ್ಯಾಪಕರು, ಸಾರ್ವಜನಿಕರು ಹಾಜರಿದ್ದರು.