

ಜಾಗ ನೀಡಿದರೆ ಬೆಂಗಳೂರು-ಸತ್ಯಮಂಗಲಕ್ಕೆ ರೈಲು ಸಂಪರ್ಕ
* ಕೇಂದ್ರ ಜಲಶಕ್ತಿ ಮತ್ತು ರೈಲ್ವೆಖಾತೆಗಳ ರಾಜ್ಯಸಚಿವ ವಿ.ಸೋಮಣ್ಣ ಅಭಯ
ವಿಜಯವಾಣಿ ಸುದ್ದಿಜಾಲ ಕನಕಪುರ
ಬೆಂಗಳೂರಿನಿಂದ ಕನಕಪುರ ಮೂಲಕ ಸತ್ಯಮಂಗಲದವರೆಗೆ ರೈಲು ಯೋಜನೆ ಕಾಮಗಾರಿ ಪೂರ್ಣವಾಗಲು ರಾಜ್ಯ ಸರ್ಕಾರ ಜಾಗ ನೀಡಿದರೆ, ಕೇಂದ್ರದಿಂದ ಮೂರೇ ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ಗಡಿಪ್ರದೇಶ ಸೋಮಣ್ಣರ ಸ್ವಗ್ರಾಮದ ಯಲವನಾಥದಲ್ಲಿ ಶನಿವಾರ ಮಾತ-ಪಿತೃಗಳ ಸಮಾಧಿಗೆ ಪೂಜೆಸಲ್ಲಿಸಿ ಮಾತನಾಡಿ, ಸತ್ಯಮಂಗಲದವರೆಗೆ ರೈಲು ಕಾಮಗಾರಿ ಪೂರ್ಣಗೊಳ್ಳಬೇಕೆಂಬ ವಿಷಯ ಮೂರು ತಲೆಮಾರಿನಿಂದಲೂ ಕೂಗು ಕೇಳಿಬರುತ್ತಿದೆ. ಈ ಹಿಂದೆ ದ್ರುವನಾರಾಯಣ್ ಅವರ ಒತ್ತಡಕ್ಕೆ ಮಣಿದಿದ್ದ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಯೋಜನೆ ರೂಪಿಸಿದ್ದರೆ ವಿನಃ ಅನುಷ್ಠಾನಕ್ಕೆ ಮುಂದಾಗಿರಲಿಲ್ಲ. ನಾನು ರಾಜ್ಯದಲ್ಲಿ ಮೂಲ ಸೌಕರ್ಯಗಳ ಸಚಿವರಾಗಿದ್ದಾಗ ವಿಶೇಷ ಒತ್ತುನೀಡಲಾಗಿತ್ತು. ಆದರೂ ಕಾಮಗಾರಿ ಅನುಷ್ಠಾನಕ್ಕೆ ಬರಲು ಆಗಿರಲಿಲ್ಲ ಎಂದರು.
ರಾಜ್ಯ ಸರ್ಕಾರದಿಂದ ಜಾಗ ಗುರುತುಪಡಿಸಿ ಅಲ್ಲಿ ಜಮೀನು ಕಳೆದುಕೊಳ್ಳುವವರಿಗೆ ಪರಿಹಾರ ನೀಡಿದರೆ ಮೂರು ವರ್ಷಗಳಲ್ಲಿಯೇ ಈ ರೈಲ್ವೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ರೈಲ್ವೆ ಯೋಜನೆ ಹಾಗೂ ಮೇಕೆದಾಟು ಯೋಜನೆಗಳನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ಕೈಗೆತ್ತಿಕೊಳ್ಳಬೇಕಾದರೆ ರಾಜ್ಯ ಸರ್ಕಾರದಿಂದ ಯಾವುದೇ ತೊಡಕು ಉಂಟಾಗಬಾರದು. ಈ ಮೂಲಕ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಎಂತಹ ಯೋಜನೆಗಳನ್ನಾದರೂ ಕೇಂದ್ರ ಅನುಷ್ಠಾನಕ್ಕೆ ತರಲು ಸಿದ್ಧವಿದೆ. ದಕ್ಷಿಣ ಭಾರತದ ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳ ಜತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಂಡಾಗ ಯಾವುದೇ ಸಂಘರ್ಷ ಎದುರಾಗುವುದಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಐದು ಮಂದಿ ಆದಿಯಾಗಿ ರಾಜ್ಯದ ಬಹುಪಾಲನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಚಿಂತನೆ ಮಾಡಿದ್ದೇವೆ. ಅದೇ ರೀತಿ ರಾಜ್ಯದ ಜನಪರ ಅಭಿವೃದ್ಧಿಗೆ ದೃಢ ನಿರ್ಧಾರ ಮಾಡಿದ್ದೇವೆ. ರಾಜ್ಯದಲ್ಲಿ ಬಹುತೇಕ ಭಾಗಗಲ್ಲಿ ರೈಲ್ವೆ ಕ್ರಾಸಿಂಗ್‌ಗಳನ್ನು ಮಾಡಬೇಕಿದೆ. ಇವುಗಳನ್ನೂ ಎರಡು ವರ್ಷಗಳಲ್ಲಿ ಮಾಡಿ ಮುಗಿಸುತ್ತೇವೆ ಎಂದರು.
ಉದ್ಯಮಿ ವಿ.ರಾಜಣ್ಣ, ಶಿವಲಿಂಗೇಗೌಡ, ವೈ.ಕೆ.ನಾಗೇಶ್, ಶಿವಶಂಕರ್, ಶಂಭುಲಿಂಗಶೆಟ್ಟಿ, ರೇಣುಕಯ್ಯ, ಧರೇಶ್, ಭೈರಪ್ಪ, ಎಂ.ಎನ್.ನಾಗರಾಜು ಸೇರಿ ಅಧಿಕಾರಿಗಳು, ಯಲವನಾಥ ಗ್ರಾಮಸ್ಥರು ಇದ್ದರು.
ಮೇಕೆದಾಟಿಗೂ ಸಿದ್ಧ : ಬಹಳ ವರ್ಷಗಳಿಂದ ಮೇಕೆದಾಟು ಅನುಷ್ಠಾನವಾಗಬೇಕೆಂಬ ಕೂಗು ಮೈಸೂರು ಪ್ರಾಂತ್ಯದಲ್ಲಿ ಕೇಳಿಬರುತ್ತಿದೆ. ಈ ಯೋಜನೆಗೂ ಕೇಂದ್ರ ಸರ್ಕಾರ ಬದ್ಧವಾಗಿದೆ. ಕೇಂದ್ರಾಡಳಿತದಲ್ಲಿ ಕರ್ನಾಟಕ ಒಂದೇ ಅಲ್ಲ, ಉಳಿದ 30 ರಾಜ್ಯಗಳೂ ಸಮರ್ಪಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ದೃಢ ನಿರ್ಧಾರ ಪ್ರಧಾನಮಂತ್ರಿಗಳಲ್ಲಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದೊಂದಿಗೆ ಚರ್ಚಿಸಿ ಅವರ ಮನವೊಲಿಸುವ ಮೂಲಕ ಯೋಜನೆಯನ್ನು ರೂಪಿಸಲಾಗುವುದು. ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯಾವ ರಾಜ್ಯಗಳೂ ಅಡ್ಡಿಪಡಿಸುವುದಿಲ್ಲ. ರಾಜ್ಯ ಸರ್ಕಾರವೂ ರೈಲ್ವೆ ಮತ್ತು ಮೇಕೆದಾಟು ಯೋಜನೆಗೆ ತೊಡಕುಂಟಾಗದಂತೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.