ಜಲ್ಲಿಪಾಳ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಚಾಲನೆ

26 HANUR 3
Published on

ಹನೂರು: ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಶನಿವಾರ ನೂತನ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.

ಜಲ್ಲಿಪಾಳ್ಯ ಗ್ರಾಮ ತಾಲೂಕಿನ ಗಡಿಯಾಗಿದ್ದು, ಈ ಭಾಗದಲ್ಲಿ ನೆಲ್ಲೂರು, ಕೂಡಲೂರು, ಪೆದ್ದನಪಾಳ್ಯ, ಹೂಗ್ಯಂ ಸೇರಿದಂತೆ ಹತ್ತಾರು ಗ್ರಾಮಗಳಿವೆ. ಇಲ್ಲಿನ ಜನರು ಕೆಲಸ ಕಾರ್ಯಗಳ ನಿಮಿತ್ತ ರಾಮಾಪುರ, ಹನೂರು, ಕೊಳ್ಳೇಗಾಲ, ಮೈಸೂರು ಹಾಗೂ ಇನ್ನಿತರ ಕಡೆಗಳಿಗೆ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳುತ್ತಾರೆ. ಹಾಗಾಗಿ ಈ ಮಾರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವನ್ನು ಒದಗಿಸಲಾಗಿತ್ತು. ಆದರೆ ಸಂಚರಿಸುತ್ತಿದ್ದ ಬಸ್ ಹಳೆಯದಾಗಿದ್ದು, ಆಗಾಗ್ಗೆ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿತ್ತು. ಇದರಿಂದ ಸಾರ್ವಜನಿಕರು ಅದರಲ್ಲೂ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಹೆಚ್ಚುವರಿ ಬಸ್ ಇಲ್ಲವೇ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಲೇ ಇದ್ದರು. ಈ ಬಗ್ಗೆ ಅಗತ್ಯ ಕ್ರಮವಹಿಸಿದ ಶಾಸಕ ಎಂ.ಆರ್.ಮಂಜುನಾಥ್ ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಮಾರ್ಗದ ಬಸ್ ಸೇವೆಗೆ ಚಾಲನೆ ನೀಡುವ ಮೂಲಕ ಈ ಭಾಗದ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ.

ಪ್ರತಿಹಳ್ಳಿಗೂ ಬಸ್ ಸೌಕರ್ಯ: ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಈ ಭಾಗದಲ್ಲಿನ ಜನರು ಹಾಗೂ ವಿದ್ಯಾರ್ಥಿಗಳು ಸಂಚರಿಸಲು ಸಮರ್ಪಕ ಬಸ್ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡು ಇದೀಗ ಬಸ್ ಸಂಚಾರಕ್ಕೆ ಚಾಲನೆ ನೀಡುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಇನ್ನು ತಾಲೂಕಿನ ಕೆಲವು ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯ ಇಲ್ಲದಿರುವುದು ಗಮನದಲ್ಲಿದೆ. ಹಾಗಾಗಿ ಪ್ರತಿ ಹಳ್ಳಿಗೂ ಬಸ್ ಸೌಕರ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಸಾರಿಗೆ ಸಚಿವರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಬಸ್ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಬಳಿಕ ತಮಿಳುನಾಡು-ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಗುಡ್ಡೆಯೂರು ಹಳ್ಳಕ್ಕೆ ತೆರಳಿದ ಶಾಸಕರು ಸೇತುವೆ ನಿರ್ಮಿಸುವ ಸಂಬಂಧ ಪರಿಶೀಲನೆ ನಡೆಸಿದರು.

ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಶಂಕರ್, ಗ್ರಾಪಂ ಸದಸ್ಯರಾದ ಪಳನಿಸ್ವಾಮಿ, ಶಿವಣ್ಣ, ಮಾದೇಶ್, ಮುಖಂಡರಾದ ರಾಜುಗೌಡ, ಸಿದ್ದರಾಜು, ಗಿರೀಶ್, ಮುನಿಯಪ್ಪ, ಮಹೇಶ್, ಮಹದೇವ, ಜಪಮಾಲೆ, ಸೂಸೈರಾಜು, ವೆಂಕಟೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net