

ಯಲ್ಲಾಪುರ: ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೂ ಭಾರಿ ಮಳೆಯಾಗಿದ್ದು, ಶನಿವಾರ ಮಧ್ಯಾಹ್ನದ ಹೊತ್ತಿಗೆ ಮಳೆ ನಿಂತಿದೆ. ಮಳೆಯಿಂದಾಗಿ ಹಲವೆಡೆ ಹಾನಿ ಉಂಟಾಗಿದೆ.
ತಾಲೂಕಿನ ಹಾಸಣಗಿಯಲ್ಲಿ ಕಾಲುವೆ ಒಡೆದು ಅಬ್ದುಲ್ ಕರೀಮ ಹಸನ್ಸಾಬ್ ಶೇಖ್ ಅವರ ನಾಟಿ ಮಾಡಿದ ಗದ್ದೆಗೆ ಹಾನಿಯಾಗಿದೆ. ಹಳ್ಳದ ಏರಿ ಒಡೆದು ಹಾಸಣಗಿಯ ಗಣಪತಿ ಸುಬ್ರಾಯ ಭಟ್ಟ ಅವರ ತೋಟದ ಮಣ್ಣು, ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ಹಿತ್ಲಸರದ ಮಾದೇವಿ ತಮ್ಮು ಸಿದ್ದಿ ಅವರಿಗೆ ಸೇರಿದ ಕೊಟ್ಟಿಗೆಗೆ ಹಾನಿಯಾಗಿದ್ದು, ಹಿತ್ಲಸರದ ಲಕ್ಷ್ಮೀ ಮೋಹನ ಮರಾಠಿ ಅವರ ಕಚ್ಚಾಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ವಜ್ರಳ್ಳಿಯ ಅಣ್ಣಪ್ಪ ನಾರಾಯಣ ಭಟ್ಟ ಅವರ ತೋಟದಲ್ಲಿ ಅನೇಕ ಬಾಳೆ ಗಿಡ, ಅಡಕೆ ಮರಗಳು ಧರೆಗುರುಳಿವೆ. ಹರನಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯ ಮೇಲ್ಛಾವಣಿಯ ತಗಡುಗಳು ಮುರಿದು ಬಿದ್ದು ಹಾನಿಯಾಗಿದೆ. ಹಿತ್ಲಳ್ಳಿಯಿಂದ ಚವತ್ತಿಗೆ ಹೋಗುವ ಮುಖ್ಯ ರಸ್ತೆಯ ಪಕ್ಕದ ಧರೆ ಡಿ.ಟಿ. ಹೆಗಡೆ ಅವರ ಮನೆಯ ಬಳಿ ಕುಸಿದಿದೆ. ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಶೀಗೆಮನೆಯ ಚಂದ್ರಕಲಾ ರಾಮಕೃಷ್ಣ ಹೆಗಡೆ ಅವರ ಮನೆಯ ಮೇಲೆ ಮರ ಬಿದ್ದು ಅರ್ಧಭಾಗ ಹಾನಿಯಾಗಿದೆ. ತೋಳಗೋಡಿನ ವಿಶ್ವೇಶ್ವರ ಶಾಸ್ತ್ರಿ ಅವರಿಗೆ ಸೇರಿದ ಕಬ್ಬು ಹಾಗೂ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ವ್ಯಾಪಕ ನಷ್ಟ ಉಂಟಾಗಿದೆ. ಈ ಎಲ್ಲಾ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಹಾನಿ ಪರಿಶೀಲಿಸಿದರು.