

ಬಾಗಲಕೋಟೆ: ಘಟಪ್ರಭಾ ನದಿ ತೀರದ ಅನೇಕ ಸೇತುವೆಗಳು ಈಗಾಗಲೇ ಜಲಾವೃತಗೊಂಡಿದ್ದು, ಸೇತುವೆ ಮೇಲೆ ಎರಡ್ಮೂರು ಅಡಿ ಎತ್ತರಲ್ಲಿ ನೀರು ಹರಿದು ಬರುತ್ತಿದೆ. ಅಪಾಯ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದರೂ ಸಹ ಕೆಲವರೂ ಕಾಲ್ನಡಿಗೆ, ಬೈಕ್ ಸಂಚಾರ, ಲಘುವಾಹನ ಸಂಚಾರ ನಡೆಸುತ್ತಿದ್ದಾರೆ. ಇದು ಅಪಾಯಕ್ಕೆ ಅವ್ಹಾನ ನೀಡುವಂತಿದ್ದು, ಈ ಬಗ್ಗೆ ಸಾಕಷ್ಟು ತಿಳಿ ಹೇಳುವ ಕೆಲಸ ನಡೆದಿದ್ದರೂ ಕೆಲವರು ಸಲಹೆಗಳಿಗೆ ಕಿವಿಗೊಡದೇ ದುಸ್ಸಾಹಸಕ್ಕೆ ಮುಂದಾಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಪ್ರವಾಹಕ್ಕೆ ಸಿಲುಕುವ ಪ್ರದೇಶಗಳಿಗೆ ಡಿಸಿ ಭೇಟಿ :
ಕಳೆದ ಮೂರು ದಿನಗಳಿಂದ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಪ್ರವಾಹ ಉಂಟಾಗಬಹುದಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರದ ಪ್ರದೇಶಗಳಿಗೆ ಭೇಟಿ ಮಾಡುತ್ತಿದ್ದು, ಮಂಗಳವಾರ ಸಹ ತುಬಚಿ, ಶೂರ್ಪಾಲಿ ಗ್ರಾಮಗಳ ಕಡೆಗೆ ತೆರಳಿದ್ದರು. ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಹೆಚ್ಚಿದ್ದು, ಯಾವುದೇ ಕ್ಷಣದಲ್ಲೂ ಇನ್ನೂ ಹೆಚ್ಚು ಪ್ರಮಾಣದ ನೀರು ಹರಿದು ಬರಬಹುದು. ಹೀಗಾಗಿ ಜನರು ಎಚ್ಚರ ವಹಿಸಬೇಕು. ಪ್ರವಾಹ ಸಂಕಷ್ಟಕ್ಕೆ ಸಿಲುಕುವ ಮುನ್ನವೇ ಬೇರೆ ಕಡೆಗೆ ಸ್ಥಳಾಂತರವಾಗಬೇಕು. ಜಾನುವಾರುಗಳನ್ನು ಕರೆದುಕೊಂಡು ಹೋಗಿ ಎಂದು ಜನರಲ್ಲಿ ಮನವಿ ಮಾಡಿದರು.
ಹಿಪ್ಪರಗಿ ಜಲಾಶಯಕ್ಕೆ ಹೆಚ್ಚಿದ ನೀರಿನ ಹರಿವು :
ಮಹಾರಾಷ್ಟ್ರದಲ್ಲಿ ಮಳೆ ಆರ್ಭಟಿಸುತ್ತಿದ್ದು, ಇದೀಗ ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಮಂಗಳವಾರ ೧.೨೨ ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಅಷ್ಟು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇಲ್ಲಿ ೨ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಬಂದರೆ ಜಮಖಂಡಿ ತಾಲೂಕಿನ ಮುತ್ತೂರ, ತುಬಚಿ ಮೊದಲು ಪ್ರವಾಹಕ್ಕೆ ಒಳಗಾಗಲಿವೆ.
ಇನ್ನು ಆಲಮಟ್ಟಿ ಜಲಾಶಯದಿಂದ ಮಂಗಳವಾರ ೧.೫೦ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಇದು ಮತ್ತಷ್ಟು ಹೆಚ್ಚುವ ಸಂಭವ ಇದೆ. ಇದರಿಂದ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮಗಳಲ್ಲಿ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇಲ್ಲಿ ೨.೫೦ ಲಕ್ಷಕ್ಕೂ ಹೆಚ್ಚು ನೀರು ಹೊರಬಿಟ್ಟಲ್ಲಿ ಹುನಗುಂದ ತಾಲೂಕಿನ ಕೆಲ ಗ್ರಾಮಗಳಿಗೆ ಪ್ರವಾಹ ಸ್ಥಿತಿ ಉಂಟಾಗಲಿದೆ.
ಘಟಪ್ರಭಾ ನದಿಗೆ ಸದ್ಯ ೨೨ ಸಾವಿರ ಕ್ಯೂಸೆಕ್ ನೀರಿನ ಹರಿವು ಇದ್ದು, ಇದು ೩೦ ಸಾವಿರ ದಾಟಿದಲ್ಲಿ ವಿಶೇಷವಾಗಿ ಮುಧೋಳ ತಾಲೂಕಿನ ಅನೇಕ ಗ್ರಾಮಗಳು ಸಂಕಷ್ಟಕ್ಕೆ ಸಿಲುಕಲಿವೆ.