

ಕೊಳ್ಳೇಗಾಲ: ಹನೂರು ಕ್ಷೇತ್ರದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಜರೂರಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚನೆ ನೀಡಿದರು.
ಪಟ್ಟಣದ ಕಾವೇರಿ ವನ್ಯಜೀವಿ ವಿಭಾಗದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಲ ಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಈ ಯೋಜನೆ ಪರಿಪೂರ್ಣವಾದರೆ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆ ದೋರುವುದಿಲ್ಲ. ಹನೂರು ಕ್ಷೇತ್ರ ಮಲೆ ಮಹದೇಶ್ವರ ವನ್ಯಜೀವಿ ಧಾಮ, ಕಾವೇರಿ ವನ್ಯಜೀವಿ ವಿಭಾಗ ಹಾಗೂ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶವನ್ನು ಒಳಗೊಂಡಂತಿದೆ. ಯೋಜನೆಯ ಪೈಪ್‌ಲೈನ್ ಕಾಮಗಾರಿ ಹಾಗೂ ಟ್ಯಾಂಕ್ ನಿರ್ಮಾಣ ಕಾಮಗಾರಿಗಳಿಗೆ ಅರಣ್ಯ ಇಲಾಖೆಯು ಫಾರೆಸ್ಟ್ ಕ್ಲಿಯರೆನ್ಸ್ ಪಡೆಯುವ ಕೆಲಸಗಳು ತ್ವರಿತವಾಗಿ ಆಗಬೇಕು. ಯೋಜನೆ ಪೂರ್ಣಗೊಂಡು ಪ್ರತಿ ಹಳ್ಳಿಗೂ ಸೌಲಭ್ಯ ಸಿಗಬೇಕು. ಹಾಗಾಗಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಈ ವೇಳೆ ಇಲಾಖೆ ಅಧಿಕಾರಿಗಳಿಂದ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯರ್ವಹಣಾಧಿಕಾರಿ ಮೋನಾ ರೋತ್, ಡಿಸಿಎಫ್ ಭಾಸ್ಕರ್, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧೀಕ್ಷಕ ಇಂಜಿನಿಯರ್ ವೀರಪ್ಪ, ಇಇ ಜಗದೀಶ್, ಎಇಇ ಸುಧನ್ವನಾಗ್ ಮತ್ತಿತರಿದ್ದರು.