

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಜಮೀನುಗಳಿಗೆ ನುಗ್ಗಿ ಭತ್ತದ ಫಸಲನ್ನು ತಿಂದು, ತುಳಿದು ಹಾಳು ಮಾಡಿವೆ. ರೈತರು ಇದರಿಂದ ನಷ್ಟ ಅನುಭವಿಸುವಂತಾಗಿದೆ.
ತಾಲೂಕಿನ ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು, ಅರೇಹಳ್ಳಿ ಹೋಬಳಿಯ ಕಾನನಹಳ್ಳಿ, ಕುಂಬಾರಹಳ್ಳಿ, ಸಿರಗುರ, ನೇರಲಮಕ್ಕಿ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು, ಜಮೀನುಗಳಲ್ಲಿ ರೈತರು ನಾಟಿ ಮಾಡಿದ್ದ ಸಸಿಗಳನ್ನು ನಾಶ ಮಾಡುತ್ತಿವೆ. ಕಳೆದ ಸಾಕಷ್ಟು ದಿನಗಳಿಂದ ಈ ಗ್ರಾಮಗಳ ಆಸುಪಾಸಿನಲ್ಲೆ ಕಾಡಾನೆಗಳು ಬೀಡು ಬಿಟ್ಟಿದ್ದರೂ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜತೆಗೆ ಜೋರಾಗಿ ಬರುತ್ತಿರುವ ಮಳೆಯ ನಡುವೆಯೇ ಆನೆಗಳ ಉಪಟಳ ಹೆಚ್ಚಾಗಿದೆ. ನೇರಲಮಕ್ಕಿಯಲ್ಲೆ ಬೀಡು ಬಿಟ್ಟಿರುವ ಕಾಡಾನೆಗಳು ಸಂಜೆಯಾಗುತಿದ್ದಂತೆಯೇ ಹಿಂಡಾಗಿ ಹೊರಟು ಮನಸ್ಸಿಗೆ ಬಂದಲ್ಲಿ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇದರಿಂದಾಗಿ ರೈತರು ಜಮೀನುಗಳತ್ತ ಹೋಗಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಆನೆಗಳನ್ನು ಓಡಿಸುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಈ ಭಾಗದ ಗ್ರಾಮಸ್ಥರು, ರೈತರು ಹಾಗೂ ಕೂಲಿ ಕಾರ್ಮಿಕರ ಆಗ್ರಹವಾಗಿದೆ.
ಶಾಶ್ವತವಾಗಿ ಓಡಿಸಲು ಕ್ರಮ ವಹಿಸಿ: ಬೇಲೂರು ತಾಲೂಕಿನ ಮಲೆನಾಡು ಭಾಗದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ತೋಟ, ಗದ್ದೆಗಳಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗುವ ಮುನ್ನ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಾಡಾನೆಗಳನ್ನು ಶಾಶ್ವತವಾಗಿ ತಾಲೂಕಿನಿಂದ ಓಡಿಸಲು ಮುಂದಾಗುವ ಮೂಲಕ ಕೂಲಿ ಕಾರ್ಮಿಕರು, ಕಾಫಿ ಬೆಳೆಗಾರರು, ರೈತರು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.